4
ಕ್ರಿಸ್ತನ ದೇಹದಲ್ಲಿನ ಐಕ್ಯತೆ
1 ನೀವು ದೇವರಿಂದ
*ಕರೆಯಲ್ಪಟ್ಟವರಾದ ಕಾರಣ ಆ ಕರೆಗೆ
†ಯೋಗ್ಯರಾಗಿ ಜೀವಿಸಬೇಕೆಂದು, ಕರ್ತನ ಸೇವೆಯಲ್ಲಿ
‡ಸೆರೆಯವನಾದ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
2 ನೀವು ಪೂರ್ಣ
§ವಿನಯ, ಸಾತ್ವಿಕತ್ವಗಳಿಂದಲೂ
*ದೀರ್ಘಶಾಂತಿಯಿಂದಲೂ ಕೂಡಿದವರಾಗಿ,
†ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ.
3 ‡ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಆಸಕ್ತರಾಗಿರಿ.
4 ನೀವು ಕರೆಯಲ್ಪಟ್ಟಾಗ
§ಒಂದೇ ನಿರೀಕ್ಷೆಗಾಗಿ ಕರೆಯಲ್ಪಟ್ಟವರಂತೆಯೇ,
*ನೀವೆಲ್ಲರೂ ಒಂದೇ ದೇಹಕ್ಕೆ ಸೇರಿದವರು,
†ಒಬ್ಬನೇ ಆತ್ಮನನ್ನು ಹೊಂದಿದವರು,
5 ನಿಮ್ಮೆಲ್ಲರಿಗೂ
‡ಕರ್ತನು ಒಬ್ಬನೇ,
§ನಂಬಿಕೆಯು ಒಂದೇ,
*ದೀಕ್ಷಾಸ್ನಾನ ಒಂದೇ,
6 †ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ.
‡ಆತನು ಎಲ್ಲರ ಮೇಲಿರುವವನೂ, ಎಲ್ಲರ ಮುಖಾಂತರ ಕಾರ್ಯ ನಡಿಸುವವನೂ, ಎಲ್ಲರಲ್ಲಿ ವಾಸಿಸುವವನೂ ಆಗಿದ್ದಾನೆ.
7 ಆದರೆ
§ಕ್ರಿಸ್ತನ ವರದ ಅಳತೆಯ ಪ್ರಕಾರವೇ ಪ್ರತಿಯೊಬ್ಬರಿಗೆ ಕೃಪಾವರವು ಕೊಡಲ್ಪಟ್ಟಿದೆ.
8 ಆದ್ದರಿಂದ ದೇವರವಾಕ್ಯದಲ್ಲಿ ಹೀಗೆ ಹೇಳಿದೆ,
*“ಆತನು ಉನ್ನತ ಸ್ಥಾನಕ್ಕೆ ಏರಿಹೋದಾಗ
†ತಾನು ಸೆರೆಯಾಳುಗಳನ್ನು ಸೆರೆಹಿಡಿದುಕೊಂಡು ಹೋಗಿ
ಮನುಷ್ಯರಿಗೆ ವರಗಳನ್ನು ಕೊಟ್ಟನು.”
9 ‡“ಏರಿಹೋದನೆಂದು” ಹೇಳಿದ್ದರ ಅರ್ಥವೇನು? ಭೂಮಿಯ ಅಧೋಭಾಗಕ್ಕೆ ಇಳಿದಿದ್ದನೆಂತಲೂ ಹೇಳಿದ ಹಾಗಾಯಿತಲ್ಲಾ?
10 ಇಳಿದು ಬಂದಾತನು,
§ಸಮಸ್ತವನ್ನು ತುಂಬುವುದಕ್ಕಾಗಿ ಮೇಲಣ
*ಎಲ್ಲಾ ಲೋಕಗಳಿಗಿಂತಲೂ ಉನ್ನತಕ್ಕೆ ಏರಿಹೋದವನು ಆಗಿದ್ದಾನೆ.
11 ಆತನು
† ಕೆಲವರನ್ನು ಅಪೊಸ್ತಲರನ್ನಾಗಿಯೂ, ಕೆಲವರನ್ನು ಪ್ರವಾದಿಗಳನ್ನಾಗಿಯೂ,
‡ಕೆಲವರನ್ನು ಸುವಾರ್ತಿಕರನ್ನಾಗಿಯೂ, ಕೆಲವರನ್ನು
§ಸಭಾಪಾಲಕರನ್ನಾಗಿಯೂ, ಬೋಧಕರನ್ನಾಗಿಯೂ ನೇಮಿಸಿದನು.
12 ನಾವೆಲ್ಲರೂ ನಂಬಿಕೆಯಿಂದಲೂ ದೇವಕುಮಾರನ ವಿಷಯವಾದ ಜ್ಞಾನದಿಂದಲೂ ಉಂಟಾಗುವ ಐಕ್ಯತೆಯನ್ನು ಹೊಂದಿ, ಪರಿಪಕ್ವತೆಯನ್ನು ಪಡೆದು,
* ಕ್ರಿಸ್ತನ ಪರಿಪೂರ್ಣತೆಯ ಮಟ್ಟವನ್ನು ತಲುಪುವ ತನಕ,
13 ದೇವಜನರನ್ನು ದೇವರ ಸೇವೆಗೆ ಸಿದ್ಧಗೊಳಿಸುವುದಕ್ಕೂ,
†ಕ್ರಿಸ್ತನ ದೇಹವೆಂಬ ಸಭೆಯು ಅಭಿವೃದ್ಧಿಯಾಗುವುದಕ್ಕೋಸ್ಕರವೂ ಆತನು ಇವರನ್ನು ನೇಮಿಸಿದನು.
14 ಆದ್ದರಿಂದ ನಾವು ಇನ್ನು ಮೇಲೆ ಕೂಸುಗಳಾಗಿರದೇ, ದುರ್ಜನರ ವಂಚನೆಗಳಿಗೂ, ಕುಯುಕ್ತಿಗೂ ಒಳಬಿದ್ದು, ನಾನಾ ಉಪದೇಶಗಳಿಂದ ಕಂಗೆಟ್ಟು
‡ಗಾಳಿಯಿಂದ ಅತ್ತಿತ್ತ ಓಲಾಡುವವರ ಹಾಗಿರದೇ,
15 §ಪ್ರೀತಿಯಲ್ಲಿ ಸತ್ಯವನ್ನು ಮಾತನಾಡುತ್ತಾ
*ಎಲ್ಲಾ ವಿಷಯಗಳಲ್ಲಿಯೂ
†ತಲೆಯಾಗಿರುವ ಕ್ರಿಸ್ತನಲ್ಲಿ ಬೆಳೆಯುವವರಾಗಿರೋಣ.
16 ‡ದೇಹವೆಲ್ಲಾ ಆತನ ಮುಖಾಂತರ ಪ್ರತಿ ಕೀಲಿನಿಂದ ಬಿಗಿಯಾಗಿ ಜೋಡಿಸಲ್ಪಟ್ಟು ಐಕ್ಯವಾಗಿದ್ದು,
§ಪ್ರತಿಯೊಂದು ಅಂಗವು ತನ್ನ ಕೆಲಸವನ್ನು ಮಾಡುವುದರಿಂದ ದೇಹವು ಪ್ರೀತಿಯಲ್ಲಿ ಬೆಳೆದು ಕ್ಷೇಮಾಭಿವೃದ್ಧಿಯನ್ನು ಹೊಂದುತ್ತದೆ.
ಕ್ರಿಸ್ತನಲ್ಲಿ ಹೊಸ ಜೀವನ
ಕೊಲೊ 3:5-17
17 ಆದ್ದರಿಂದ ನಾನು ಕರ್ತನಲ್ಲಿ ಹೇಳುವುದೇನಂದರೆ
*ಅನ್ಯಜನರು ನಡೆದುಕೊಳ್ಳುವ ಹಾಗೆ ನೀವು ಇನ್ನು ಮುಂದೆ ನಡೆದುಕೊಳ್ಳಬಾರದು.
†ಅವರು ನಿಷ್ಪ್ರಯೋಜನವಾದ ಬುದ್ಧಿಯುಳ್ಳವರಾಗಿ ನಡೆದುಕೊಳ್ಳುತ್ತಾರೆ.
18 ‡ಅವರ ಮನಸ್ಸಿಗೆ ಕತ್ತಲು ಕವಿದಿದೆ, ಅವರು
§ತಮ್ಮ ಕಠಿಣವಾದ ಹೃದಯದ ನಿಮಿತ್ತದಿಂದಲೂ ಮತ್ತು ತಮ್ಮಲ್ಲಿರುವ ಅಜ್ಞಾನದ ನಿಮಿತ್ತದಿಂದಲೂ ದೇವರಿಂದಾಗುವ ಜೀವಕ್ಕೆ
*ದೂರವಾಗಿದ್ದಾರೆ.
19 ಅವರು ಲಜ್ಜೆಗೆಟ್ಟವರಾಗಿ
†ತಮ್ಮನ್ನು ಬಂಡುತನಕ್ಕೆ ಒಪ್ಪಿಸಿಕೊಟ್ಟು ಎಲ್ಲಾ ವಿಧವಾದ ಅಶುದ್ಧ ಕೃತ್ಯಗಳನ್ನು ಅತ್ಯಾಶೆಯಿಂದ ನಡೆಸುವವರಾಗಿದ್ದಾರೆ.
20 ನೀವಾದರೋ
‡ಕ್ರಿಸ್ತನ ಬೋಧನೆಯನ್ನು ಅಂಥದೆಂದು ಕಲಿತುಕೊಳ್ಳಲಿಲ್ಲ.
21 ಆತನಿಂದಲೇ ಕೇಳಿ
§ಆತನಲ್ಲಿಯೇ ಉಪದೇಶವನ್ನು ಹೊಂದಿದ್ದೀರಲ್ಲಾ.
22 ಯೇಸುವಿನಲ್ಲಿರುವ ಸತ್ಯೋಪದೇಶವು ಯಾವುದೆಂದರೆ
*ನೀವು ನಿಮ್ಮ ಹಿಂದಿನ ನಡತೆಯನ್ನು ಅನುಸರಿಸದೇ
†ಪೂರ್ವಸ್ವಭಾವವನ್ನು ತೆಗೆದುಹಾಕಿಬಿಡಬೇಕು. ಅದು ಮೋಸಕರವಾದ ದುರಾಶೆಗಳಿಂದ ಕೆಟ್ಟುಹೋಗುವಂಥದ್ದು.
23 ‡ನೀವು ನಿಮ್ಮ ಹೃನ್ಮನಗಳನ್ನು ನವೀಕರಿಸಿ,
§ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ.
24 ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ
*ಸತ್ಯಕ್ಕನುಗುಣವಾಗಿ ನೀತಿಯುಳ್ಳದ್ದಾಗಿಯೂ, ಪರಿಶುದ್ಧತೆಯುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿದೆ.
25 ಆದಕಾರಣ ಸುಳ್ಳಾಡುವುದನ್ನು ಬಿಟ್ಟುಬಿಟ್ಟು
†“ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ನುಡಿಯಲಿ.” ಏಕೆಂದರೆ
‡ನಾವು ಪ್ರತಿಯೊಬ್ಬರೂ ಒಂದೇ ದೇಹದ ಅಂಗಗಳಾಗಿದ್ದೇವಲ್ಲಾ.
26 §“ಕೋಪಗೊಳ್ಳಬೇಕಾಗಿ ಬಂದರೂ ಪಾಪಮಾಡಬೇಡಿರಿ,” ಸೂರ್ಯನು ಮುಳುಗುವುದಕ್ಕಿಂತ ಮೊದಲೇ ನಿಮ್ಮ ಸಿಟ್ಟು ತೀರಿಹೋಗಲಿ.
27 *ಸೈತಾನನಿಗೆ ಅವಕಾಶಕೊಡಬೇಡಿರಿ.
28 ಕಳವು ಮಾಡುವವನು ಇನ್ನು ಮುಂದೆ ಕಳವು ಮಾಡದೇ ಸ್ವಂತ
†ಕೈಯಿಂದ ಒಳ್ಳೇ ಉದ್ಯೋಗವನ್ನು ಮಾಡಿ ದುಡಿಯಲಿ. ಆಗ ಕೊರತೆಯಲ್ಲಿರುವವರಿಗೆ ಕೊಡುವುದಕ್ಕೆ ಅವನಿಂದಾಗುವದು.
29 ‡ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತು ಹೊರಡಬಾರದು. ಭಕ್ತಿಯನ್ನು ವೃದ್ಧಿ ಮಾಡುವಂತಹ ಸಮಯೋಚಿತವಾದ ಮಾತನ್ನು ಆಡಿದರೆ
§ಕೇಳುವವರಿಗೆ ಹಿತವಾಗಿ ತೋರುವುದು.
30 *ದೇವರ ಪವಿತ್ರಾತ್ಮನನ್ನು ದುಃಖಪಡಿಸಬೇಡಿರಿ. ಆತನಲ್ಲಿಯೇ ವಿಮೋಚನೆಯ ದಿನಕ್ಕಾಗಿ
†ಮುದ್ರೆ ಹೊಂದಿದ್ದೀರಲ್ಲಾ.
31 ‡ಎಲ್ಲಾ ದ್ವೇಷ, ಕೋಪ, ಕ್ರೋಧ, ಕಲಹ, ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನಗಳನ್ನೂ ನಿಮ್ಮಿಂದ ದೂರ ಮಾಡಿರಿ.
32 §ಒಬ್ಬರಿಗೊಬ್ಬರು ದಯೆಯುಳ್ಳವರಾಗಿಯೂ, ಕರುಣೆಯುಳ್ಳವರಾಗಿಯೂ ಇರಿ. ದೇವರು ನಿಮ್ಮನ್ನು ಕ್ರಿಸ್ತನಲ್ಲಿ ಕ್ಷಮಿಸಿದಂತೆ ನೀವು ಒಬ್ಬರನ್ನೊಬ್ಬರು
*ಕ್ಷಮಿಸಿರಿ.