ದೇವರ ಕಟ್ಟಳೆಗಳಿಗೆ ವಿಧೇಯರಾಗಬೇಕೆಂದು ಮೋಶೆಯು ಹೇಳಿದ್ದು
4
“ಇಸ್ರೇಲರೇ, ಈಗ ನಾನು ಉಪದೇಶಿಸಲಿರುವ ಕಟ್ಟಳೆಗಳಿಗೂ ಆಜ್ಞೆಗಳಿಗೂ ಕಿವಿಗೊಡಿರಿ. ನೀವು ಅವುಗಳಿಗೆ ವಿಧೇಯರಾದರೆ ಜೀವಿಸುವಿರಿ. ಆಗ ನೀವು ನಿಮ್ಮ ಪೂರ್ವಿಕರ ದೇವರಾದ ಯೆಹೋವನು ನಿಮಗೆ ಕೊಡಲಿರುವ ದೇಶವನ್ನು ಸ್ವಾಧೀನ ಮಾಡಿಕೊಳ್ಳುವಿರಿ. ನಾನು ಕೊಡುವ ಆಜ್ಞೆಗಳಿಗೆ ನೀವು ಏನನ್ನೂ ಸೇರಿಸಬಾರದು; ಏನನ್ನೂ ತೆಗೆಯಬಾರದು. ನಾನು ನಿಮಗೆ ತಿಳಿಸುವ ದೇವರ ಆಜ್ಞೆಗಳಿಗೆ ನೀವು ವಿಧೇಯರಾಗಬೇಕು.
“ಬಾಳ್‌ಪೆಗೋರಿನಲ್ಲಿ ನಡೆದ ಸಂಗತಿಯನ್ನು ನೀವು ನೋಡಿದ್ದೀರಿ. ಅಲ್ಲಿ ಬಾಳನನ್ನು ಪೂಜಿಸಿದವರನ್ನೆಲ್ಲಾ ಯೆಹೋವನು ನಾಶಮಾಡಿದನು. ಆದರೆ ಯಾರು ದೇವರಾದ ಯೆಹೋವನನ್ನು ಮಾತ್ರ ಸೇವಿಸಿದರೋ ಅವರು ಈಗಲೂ ಜೀವಂತರಾಗಿದ್ದಾರೆ.
“ಯೆಹೋವನು ನನಗೆ ಆಜ್ಞಾಪಿಸಿದ ವಿಧಿನಿಯಮಗಳನ್ನು ನಾನು ನಿಮಗೆ ಬೋಧಿಸಿದೆನು. ಈಗ ನೀವು ಸ್ವಾಧೀನಪಡಿಸಿಕೊಳ್ಳುವ ದೇಶದಲ್ಲಿ ನೀವು ನೆಲೆಸುವಾಗ ಆ ವಿಧಿನಿಯಮಗಳನ್ನು ಅನುಸರಿಸಬೇಕೆಂದು ನಾನು ನಿಮಗೆ ಬೋಧಿಸಿದೆನು. ಆ ನಿಯಮಗಳನ್ನು ಪರಿಪೂರ್ಣವಾಗಿ ಅಭ್ಯಾಸಿಸಿರಿ, ‘ಆಗ ಅನ್ಯಜನರು ನಿಮ್ಮನ್ನು ನೋಡಿ ನೀವು ಜ್ಞಾನಿಗಳು’ ಎಂದು ತಿಳಿದುಕೊಳ್ಳುವರು. ಆ ದೇಶದ ಜನರು ನಿಮ್ಮ ವಿಧಿನಿಯಮಗಳನ್ನು ಕೇಳಿ, ‘ನಿಜವಾಗಿಯೂ ಈ ಮಹಾ ಜನಾಂಗದ ಜನರು ಬುದ್ಧಿಯುಳ್ಳವರು ಮತ್ತು ಜ್ಞಾನಿಗಳು’ ಎಂದು ಹೇಳುವರು
“ನಾವು ನಮ್ಮ ದೇವರಾದ ಯೆಹೋವನಿಗೆ ಪ್ರಾರ್ಥಿಸುವಾಗ ಆತನು ನಮ್ಮ ಹತ್ತಿರವೇ ಇದ್ದಾನೆ. ಯಾವ ದೇಶದವರಿಗೂ ಆತನಂಥ ದೇವರಿಲ್ಲ. ನಾನು ನಿಮಗೆ ಈ ಹೊತ್ತು ಕೊಡುವ ಉಪದೇಶಗಳಿಗೆ ನ್ಯಾಯದಲ್ಲೂ ಒಳ್ಳೆಯದರಲ್ಲೂ ಸರಿಸಮಾನವಾದ ಕಟ್ಟಳೆಗಳನ್ನು ಮತ್ತು ನಿಯಮಗಳನ್ನು ಬೇರೆ ಯಾವ ದೊಡ್ಡ ದೇಶವೂ ಹೊಂದಿಲ್ಲ! ಆದರೆ ನೀವು ನೋಡಿದ್ದನ್ನು ನಿಮ್ಮ ಜೀವಮಾನವೆಲ್ಲಾ ಜಾಗ್ರತೆಯುಳ್ಳವರಾಗಿದ್ದು ಮರೆಯದೆ ಅದನ್ನು ನಿಮ್ಮ ಮಕ್ಕಳಿಗೂ ಮೊಮ್ಮಕ್ಕಳಿಗೂ ತಿಳಿಸಬೇಕು. 10 ಸೀನಾಯಿ ಬೆಟ್ಟದ ಬಳಿಯಲ್ಲಿ ನೀನು ಯೆಹೋವನ ಸನ್ನಿಧಾನದಲ್ಲಿ ನಿಂತಿದ್ದನ್ನು ನೀವು ಜ್ಞಾಪಕ ಮಾಡಿಕೊಳ್ಳಿರಿ. ಆತನು ನನಗೆ ಹೇಳಿದ್ದೇನೆಂದರೆ: ‘ನಾನು ಹೇಳುವ ಮಾತುಗಳನ್ನು ಕೇಳುವಂತೆ ಜನರನ್ನೆಲ್ಲಾ ಒಟ್ಟುಗೂಡಿಸು. ನನ್ನ ಮಾತುಗಳನ್ನು ಕೇಳಿ ಅವರು ಜೀವಮಾನವೆಲ್ಲಾ ನನ್ನನ್ನು ಸನ್ಮಾನಿಸಲು ಮತ್ತು ಭಯಭಕ್ತಿಯಿಂದಿರಲು ಕಲಿತುಕೊಳ್ಳುವರು ಮತ್ತು ಅವರ ಮಕ್ಕಳಿಗೂ ಕಲಿಸುವರು.’ 11 ಆಗ ನೀವು ಬೆಟ್ಟದ ಸಮೀಪಕ್ಕೆ ಬಂದು ನಿಂತುಕೊಂಡಿರಿ. ಆ ಪರ್ವತವು ಬೆಂಕಿಯಿಂದ ಪ್ರಜ್ವಲಿಸಿ ಆಕಾಶದ ತನಕ ಮುಟ್ಟಿತ್ತು. ಆಗ ಕಾರ್ಮೋಡವೂ ಕತ್ತಲೆಯೂ ಆವರಿಸಿತು. 12 ಆ ಬೆಂಕಿಯೊಳಗಿಂದ ಯೆಹೋವನು ಮಾತನಾಡಿದನು. ಅದು ಯಾರೋ ಮಾತಾಡಿದಂತಿತ್ತು, ಆದರೆ ನೀವು ಯಾರನ್ನೂ ಕಾಣಲಿಲ್ಲ. ನೀವು ಸ್ವರವನ್ನು ಮಾತ್ರ ಕೇಳಿದಿರಿ. 13 ಅಲ್ಲಿ ಆತನು ನಿಮ್ಮೊಂದಿಗೆ ಒಡಂಬಡಿಕೆ ಮಾಡಿಕೊಂಡನು. ಆತನು ಹತ್ತು ಆಜ್ಞೆಗಳನ್ನು ನಿಮಗೆ ಕೊಟ್ಟು ಅವುಗಳನ್ನು ಅನುಸರಿಸಲು ಆಜ್ಞಾಪಿಸಿದನು. ಆ ಹತ್ತು ಆಜ್ಞೆಗಳನ್ನು ಎರಡು ಕಲ್ಲಿನ ಹಲಗೆಗಳ ಮೇಲೆ ಬರೆದನು. 14 ಅದೇ ಸಮಯದಲ್ಲಿ ದೇವರಾದ ಯೆಹೋವನು ನನಗೆ ಇತರ ವಿಧಿನಿಯಮಗಳನ್ನು ತಿಳಿಸಿ ನೀವು ವಾಗ್ದಾನ ಮಾಡಿದ ದೇಶದೊಳಗೆ ನೆಲೆಸಿದಾಗ ಆ ವಿಧಿನಿಯಮಗಳನ್ನು ಅನುಸರಿಸಲು ನಿಮಗೆ ತಿಳಿಸಲು ಹೇಳಿದನು.
15 “ಆ ದಿನ ಸೀನಾಯಿ ಬೆಟ್ಟದಲ್ಲಿ ಸ್ವರವನ್ನು ಮಾತ್ರ ಕೇಳಿದಿರಿ. ನೀವು ಯೆಹೋವನ ರೂಪವನ್ನು ನೋಡಲಿಲ್ಲ. ದೇವರಿಗೆ ಯಾವ ಆಕಾರವೂ ಇಲ್ಲ. 16 ಆದ್ದರಿಂದ ಜಾಗ್ರತೆಯಿಂದಿರಬೇಕು. ನೀವು ಪಾಪಮಾಡಿ ನಿಮ್ಮನ್ನು ನಾಶಪಡಿಸಿಕೊಳ್ಳಬೇಡಿ. ಮನುಷ್ಯನ ರೂಪವನ್ನಾಗಲಿ 17 ಆಕಾಶದಲ್ಲಿ ಹಾರಾಡುವ ಪಕ್ಷಿಯ ರೂಪವನ್ನಾಗಲಿ ಭೂಮಿಯ ಮೇಲೆ ಸಂಚರಿಸುವ ಪ್ರಾಣಿಯ ರೂಪವನ್ನಾಗಲಿ 18 ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳ ರೂಪವನ್ನಾಗಲಿ ನೀರಿನಲ್ಲಿ ಈಜಾಡುವ ಮೀನುಗಳ ರೂಪವನ್ನಾಗಲಿ ಮಾಡಿಕೊಳ್ಳಬೇಡಿ. 19 ನೀವು ಆಕಾಶವನ್ನು ತಲೆಯೆತ್ತಿ ನೋಡುವಾಗ ಅಲ್ಲಿ ಕಾಣುವ ಸೂರ್ಯಚಂದ್ರ ನಕ್ಷತ್ರಾದಿಗಳನ್ನು ಪೂಜಿಸಬೇಡಿ. ಇವುಗಳನ್ನೆಲ್ಲಾ ಅನ್ಯರು ಪೂಜಿಸುವರು. 20 ಆದರೆ ಯೆಹೋವನು ನಿಮ್ಮನ್ನು ಈಜಿಪ್ಟ್ ದೇಶದಿಂದ ಹೊರತಂದು ತನ್ನ ಸ್ವಕೀಯ ಪ್ರಜೆಯನ್ನಾಗಿ ಮಾಡಿಕೊಂಡಿರುತ್ತಾನೆ. ಕಬ್ಬಿಣವನ್ನು ಕರಗಿಸುವ ಬೆಂಕಿಯ ಕುಲುಮೆಯಂತಿದ್ದ ಈಜಿಪ್ಟಿನಿಂದ ನಿಮ್ಮನ್ನು ಎಳೆದು ತಂದು ತನ್ನ ವಿಶೇಷ ಜನಾಂಗವಾಗಿ ನಿಮ್ಮನ್ನು ತೆಗೆದುಕೊಂಡಿರುತ್ತಾನೆ. ಈಗ ನೀವು ಆತನ ಜನರಾಗಿದ್ದೀರಿ.
21 “ನಿಮ್ಮ ದೆಸೆಯಿಂದ ಯೆಹೋವನು ನನ್ನ ಮೇಲೆ ಸಿಟ್ಟುಗೊಂಡನು. ಆ ಕಾರಣದಿಂದ ಕಾನಾನ್ ದೇಶವನ್ನು ನಾನು ಪ್ರವೇಶಿಸಬಾರದು ಎಂದು ನನಗೆ ಹೇಳಿರುತ್ತಾನೆ. ಜೋರ್ಡನ್ ನದಿಯಾಚೆ ನಿಮಗೆ ಕೊಡುವ ಆ ಉತ್ತಮ ದೇಶವನ್ನು ನಾನು ನೋಡುವುದಿಲ್ಲವೆಂದು ಪ್ರಮಾಣ ಮಾಡಿದ್ದಾನೆ. 22 ಆದ್ದರಿಂದ ನಾನು ಇದೇ ದೇಶದಲ್ಲಿ ಸಾಯುವೆನು. ಆದರೆ ನೀವು ಬೇಗನೆ ಜೋರ್ಡನ್ ನದಿಯನ್ನು ದಾಟಿ ಆ ಒಳ್ಳೆಯ ದೇಶವನ್ನು ವಶಪಡಿಸಿಕೊಂಡು ಅಲ್ಲಿ ವಾಸಿಸುವಿರಿ. 23 ನೀವು ಆ ದೇಶದಲ್ಲಿ ವಾಸಿಸುವಾಗ ನಿಮ್ಮ ದೇವರಾದ ಯೆಹೋವನೊಡನೆ ನೀವು ಮಾಡಿರುವ ಒಡಂಬಡಿಕೆಯನ್ನು ಮರೆಯಬೇಡಿರಿ. ನೀವು ಆತನ ಕಟ್ಟಳೆಗಳಿಗೆ ವಿಧೇಯರಾಗಿರಿ. ಯಾವ ವಿಗ್ರಹಗಳನ್ನಾಗಲಿ ಮಾಡಿಕೊಳ್ಳಬೇಡಿರಿ. 24 ನೀವು ಇತರ ದೇವರುಗಳನ್ನು ಪೂಜಿಸುವುದನ್ನು ಜೀವಸ್ವರೂಪನಾದ ಯೆಹೋವನು ದ್ವೇಷಿಸುವುದರಿಂದ ಬೆಂಕಿಯಂತೆ ಆತನು ನಿಮ್ಮನ್ನು ದಹಿಸಿ ಬಿಡುವನು.
25 “ನೀವು ಹೋಗುವ ದೇಶದಲ್ಲಿ ಬಹಳ ವರ್ಷ ಬಾಳಿದ ನಂತರ ನಿಮಗೆ ಮಕ್ಕಳೂ ಮೊಮ್ಮಕ್ಕಳೂ ಆಗುವರು. ಬಳಿಕ ನೀವು ನಿಮ್ಮ ಜೀವಿತಗಳನ್ನು ಹಾಳುಮಾಡಿಕೊಳ್ಳುವಿರಿ. ನೀವು ಎಲ್ಲಾ ಬಗೆಯ ವಿಗ್ರಹಗಳನ್ನು ಮಾಡಿಕೊಳ್ಳುವಿರಿ. ಅದು ದೇವರಿಗೆ ಬಹಳ ಕೋಪವನ್ನು ಉಂಟುಮಾಡುವುದು! 26 ಆದ್ದರಿಂದ ನಾನು ನಿಮಗೆ ಎಚ್ಚರಿಕೆ ಕೊಡುತ್ತಿದ್ದೇನೆ. ಆಕಾಶವೂ ಭೂಮಿಯೂ ಇದಕ್ಕೆ ಸಾಕ್ಷಿ. ಆ ಕೆಟ್ಟ ಕೆಲಸವನ್ನು ನೀವು ಮಾಡಿದರೆ ನೀವು ಹಾಳಾಗಿ ಹೋಗುವಿರಿ. ನೀವೀಗ ಜೋರ್ಡನ್ ನದಿಯನ್ನು ದಾಟಿ ಆ ದೇಶವನ್ನು ಸ್ವಾಧೀನ ಮಾಡಿಕೊಳ್ಳಲು ಹೋಗುತ್ತೀರಿ. ಆದರೆ ನೀವು ಮೂರ್ತಿಗಳನ್ನು ಮಾಡಿಕೊಂಡರೆ ಅಲ್ಲಿ ಹೆಚ್ಚುಕಾಲ ಬಾಳುವುದಿಲ್ಲ. ನೀವು ಸಂಪೂರ್ಣವಾಗಿ ನಾಶವಾಗುವಿರಿ. 27 ಯೆಹೋವನು ನಿಮ್ಮನ್ನು ಅನ್ಯದೇಶಗಳಿಗೆ ಚದರಿಸಿಬಿಡುವನು. ಆತನು ನಿಮ್ಮನ್ನು ಚದರಿಸಿಬಿಡುವ ದೇಶಗಳವರ ಮಧ್ಯದಲ್ಲಿ ನಿಮ್ಮಲ್ಲಿ ಕೆಲವರು ಮಾತ್ರ ಜೀವಂತವಾಗಿ ಉಳಿದುಕೊಳ್ಳುವರು. 28 ಅಲ್ಲಿ, ಮನುಷ್ಯರು ಕೈಯಿಂದ ಮಾಡಿದ ದೇವರುಗಳನ್ನು ಪೂಜಿಸುವಿರಿ. ಅವು ಮರಕಲ್ಲುಗಳಿಂದ ರೂಪಿಸಲ್ಪಟ್ಟಿವೆ. ಅವು ನೋಡಲಾರವು, ಕೇಳಲಾರವು, ತಿನ್ನಲಾರವು ಮತ್ತು ಮೂಸಿನೋಡಲಾರವು! 29 ಆಗ ನೀವು ನಿಮ್ಮ ದೇವರಾದ ಯೆಹೋವನನ್ನು ಹುಡುಕುವಿರಿ. ನೀವು ನಿಮ್ಮ ಹೃದಯ ಆತ್ಮಗಳಿಂದ ಹುಡುಕಿದಾಗ ಆತನು ನಿಮಗೆ ಸಿಗುವನು. 30 ನೀವು ಕಷ್ಟದಲ್ಲಿ ಬಿದ್ದಾಗ, ಅವೆಲ್ಲಾ ನಿಮಗೆ ಸಂಭವಿಸಿದಾಗ ನೀವು ನಿಮ್ಮ ದೇವರಾದ ಯೆಹೋವನ ಬಳಿಗೆ ಹಿಂದಿರುಗಿಬಂದು ಆತನಿಗೆ ವಿಧೇಯರಾಗುವಿರಿ. 31 ನಿಮ್ಮ ದೇವರಾದ ಯೆಹೋವನು ಕರುಣೆಯುಳ್ಳ ದೇವರಾಗಿದ್ದಾನೆ. ನಿಮ್ಮನ್ನು ಅಲ್ಲಿಯೇ ಇರಗೊಡಿಸುವುದಿಲ್ಲ; ನಿಮ್ಮನ್ನು ಸಂಪೂರ್ಣವಾಗಿ ನಾಶಪಡಿಸುವುದಿಲ್ಲ; ನಿಮ್ಮ ಪೂರ್ವಿಕರೊಂದಿಗೆ ಮಾಡಿದ ಒಡಂಬಡಿಕೆಯನ್ನು ಆತನು ಮರೆತುಬಿಡುವವನಲ್ಲ.
ದೇವರ ಅದ್ಭುತಕಾರ್ಯಗಳನ್ನು ಜ್ಞಾಪಕಕ್ಕೆ ತಂದುಕೊಳ್ಳಿರಿ
32 “ಇಂಥಾ ಅದ್ಭುತಕಾರ್ಯಗಳು ಹಿಂದೆ ಎಂದಾದರೂ ನಡೆದಿವೆಯೋ? ದೇವರು ಭೂಮಿಯ ಮೇಲೆ ಮಾನವನನ್ನು ನಿರ್ಮಿಸಿದ ಕಾಲದಿಂದಿಡಿದು ಇಂದಿನವರೆಗೂ ಲೋಕದ ಎಲ್ಲಾ ಕಡೆಗಳಲ್ಲಿ ನಡೆದಿರುವ ಸಂಗತಿಗಳನ್ನು ವೀಕ್ಷಿಸಿ ನೋಡಿರಿ. ಇದರಷ್ಟು ಮಹತ್ತಾದ ಯಾವುದನ್ನಾದರೂ ಎಂದಾದರೂ ಕೇಳಿರುವುದುಂಟೇ? 33 ಬೆಂಕಿಯ ಜ್ವಾಲೆಯೊಳಗಿಂದ ದೇವರು ಮಾತನಾಡಿದ್ದನ್ನು ನೀವು ಕೇಳಿದರೂ ಬದುಕಿದ್ದೀರಿ. ಬೇರೆ ಜನರಿಗೆ ಇಂಥಾ ಅನುಭವವಿದೆಯೋ? ಇಲ್ಲ. 34 ಬೇರೊಂದು ಜನಾಂಗದೊಳಗಿಂದ ಜನರನ್ನು ತನಗೋಸ್ಕರ ತೆಗೆದುಕೊಳ್ಳಲು ಬೇರೆ ಯಾವ ದೇವರಾದರೂ ಎಂದಾದರೂ ಪ್ರಯತ್ನಿಸಿದ್ದುಂಟೇ? ಇಲ್ಲ! ಆದರೆ ದೇವರಾದ ಯೆಹೋವನು ಇಂಥ ಮಹಾಕಾರ್ಯಗಳನ್ನು ಮಾಡುವುದನ್ನು ನೀವು ನೋಡಿದ್ದೀರಿ! ಆತನು ನಿಮಗೆ ತನ್ನ ಶಕ್ತಿಯನ್ನು, ಬಲವನ್ನು, ಅದ್ಭುತಕಾರ್ಯಗಳನ್ನು ಮತ್ತು ಆಶ್ಚರ್ಯಕರವಾದ ಕಾರ್ಯಗಳನ್ನು ತೋರಿಸಿದ್ದಾನೆ. ಆತನು ಈಜಿಪ್ಟಿನ ಮೇಲೆ ಬರಮಾಡಿದ ವಿಪತ್ತುಗಳನ್ನು ಮತ್ತು ಭಯಂಕರವಾದ ಘಟನೆಗಳನ್ನು ನೀವು ನೋಡಿದ್ದೀರಿ! 35 ಯೆಹೋವನು ನಿಮಗೆ ಇವುಗಳನ್ನು ತೋರಿಸಿದ್ದಾನೆ, ಯಾಕೆಂದರೆ ಆತನೇ ದೇವರೆಂದೂ ಆತನಲ್ಲದೆ ಬೇರೆ ಯಾವ ದೇವರಿಲ್ಲವೆಂದೂ ನೀವು ತಿಳಿದುಕೊಳ್ಳಬೇಕೆಂಬುದು ಆತನ ಉದ್ದೇಶವಾಗಿತ್ತು. 36 ಆಕಾಶದಿಂದ ಆತನ ಮಾತುಗಳನ್ನು ನೀವು ಕೇಳುವಂತೆ ಮಾಡಿದನು; ಭೂಮಿಯ ಮೇಲೆ ಒಂದು ದೊಡ್ಡ ಬೆಂಕಿಯನ್ನು ನೋಡುವಂತೆ ಮಾಡಿದನು; ಮತ್ತು ಅದರೊಳಗಿಂದ ನಿಮ್ಮೊಡನೆ ಮಾತನಾಡಿದನು. ನಿಮಗೆ ಪಾಠಗಳನ್ನು ಕಲಿಸುವುದಕ್ಕಾಗಿ ಇವೆಲ್ಲವನ್ನು ಮಾಡಿದನು.
37 “ದೇವರಾದ ಯೆಹೋವನು ನಿಮ್ಮ ಪೂರ್ವಿಕರನ್ನು ಪ್ರೀತಿಸಿದ್ದರಿಂದ ನಿಮ್ಮನ್ನು ಆರಿಸಿಕೊಂಡನು. ಆತನು ತನ್ನ ಮಹಾಶಕ್ತಿಯಿಂದ ನಿಮ್ಮನ್ನು ಈಜಿಪ್ಟಿನಿಂದ ಹೊರತಂದನು. 38 ನೀವು ಮುಂದುವರಿಯುತ್ತಿದ್ದಾಗ ನಿಮಗಿಂತಲೂ ಮಹತ್ತಾದ ಮತ್ತು ಬಲಿಷ್ಠವಾಗಿದ್ದ ಜನಾಂಗಗಳನ್ನು ಹೊರಡಿಸಿಬಿಟ್ಟನು. ಅವರ ದೇಶದೊಳಗೆ ಯೆಹೋವನು ನಿಮ್ಮನ್ನು ನಡಿಸಿದನು. ಅಲ್ಲಿ ನೀವು ವಾಸಿಸುವುದಕ್ಕಾಗಿ ಆ ದೇಶಗಳನ್ನು ನಿಮಗೆ ಕೊಟ್ಟನು. ಈಗಲೂ ಆತನು ಹಾಗೆಯೇ ಮಾಡುತ್ತಿದ್ದಾನೆ.
39 “ಆದ್ದರಿಂದ ಈ ಹೊತ್ತು ನೀವೆಲ್ಲಾ ಯೆಹೋವನನ್ನು ದೇವರೆಂದು ಸ್ವೀಕರಿಸಬೇಕು. ಆತನು ಮೇಲಿರುವ ಆಕಾಶಕ್ಕೂ ಕೆಳಗಿರುವ ಭೂಮಿಗೂ ದೇವರಾಗಿದ್ದಾನೆ. ಆತನ ಹೊರತು ಬೇರೆ ದೇವರುಗಳಿಲ್ಲ. 40 ನಾನು ಈ ಹೊತ್ತು ಕೊಡಲಿರುವ ಆತನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ ನೀವು ಪರಿಪಾಲಿಸಬೇಕು. ಆಗ ನಿಮಗೂ ನಿಮ್ಮ ನಂತರ ಜೀವಿಸುವ ನಿಮ್ಮ ಮಕ್ಕಳಿಗೂ ಶುಭವಾಗುವುದು. ದೇವರಾದ ಯೆಹೋವನು ನಿಮಗೆ ಕೊಡಲಿರುವ ದೇಶದಲ್ಲಿ ಶಾಶ್ವತವಾಗಿ ಬಾಳುವಿರಿ!”
ಆಶ್ರಯನಗರಗಳನ್ನು ಮೋಶೆಯು ಆರಿಸಿದ್ದು
41 ಆಮೇಲೆ ಮೋಶೆಯು ಜೋರ್ಡನ್ ನದಿಯ ಪೂರ್ವ ಪ್ರಾಂತ್ಯದ ಮೂರು ನಗರಗಳನ್ನು ಆರಿಸಿದನು. 42 ಯಾವನಾದರೂ ಒಬ್ಬ ಮನುಷ್ಯನನ್ನು ಉದ್ದೇಶವಿಲ್ಲದೆ ಆಕಸ್ಮಿಕವಾಗಿ ಕೊಂದರೆ ಅವನು ಈ ಮೂರು ನಗರಗಳಲ್ಲಿ ಯಾವುದಾದರೊಂದರಲ್ಲಿ ಆಶ್ರಯ ತೆಗೆದುಕೊಂಡಲ್ಲಿ ಅವನು ಮರಣದಂಡನೆಯಿಂದ ಪಾರಾಗುವನು ಅಂದರೆ ಅವನು ಕೊಲೆಯಾದವನನ್ನು ದ್ವೇಷಿಸದೆ ಇದ್ದಲ್ಲಿ ಮತ್ತು ಅವನನ್ನು ಕೊಲ್ಲಬೇಕೆಂಬ ಉದ್ದೇಶವಿಲ್ಲದಿದ್ದಲ್ಲಿ ಕೊಲೆಗಾರನು ಆ ನಗರದಲ್ಲಿ ಸುರಕ್ಷಿತನಾಗಿರುವನು. 43 ಆ ಮೂರು ನಗರಗಳು ಯಾವುವೆಂದರೆ: ರೂಬೇನ್ ಕುಲದವರಿಗೆ ಎತ್ತರವಾದ ಬಯಲು ಪ್ರದೇಶದಲ್ಲಿರುವ ಬೆಚೆರ್; ಗಾದ್ ಕುಲದವರಿಗೆ ಗಿಲ್ಯಾದಿನಲ್ಲಿರುವ ರಾಮೋತ್; ಮತ್ತು ಮನಸ್ಸೆ ಕುಲದವರಿಗೆ ಬಾಷಾನಿನಲ್ಲಿರುವ ಗೋಲಾನ್.
ಮೋಶೆಯ ಧರ್ಮಶಾಸ್ತ್ರದ ಪರಿಚಯ
44 ಇಸ್ರೇಲ್ ಜನರಿಗೆ ಮೋಶೆಯು ದೇವರ ಕಟ್ಟಳೆಗಳನ್ನು ಕೊಟ್ಟನು. 45 ಈಜಿಪ್ಟಿನಿಂದ ಹೊರಬಂದ ಅವರಿಗೆ ಈ ಉಪದೇಶಗಳನ್ನು, ಕಟ್ಟಳೆಗಳನ್ನು ಮತ್ತು ನಿಯಮಗಳನ್ನು ಕೊಟ್ಟನು. 46 ಜೋರ್ಡನ್ ನದಿಯ ಪೂರ್ವಭಾಗದ ಬೇತ್‌ಪೆಗೋರಿನಲ್ಲಿ ಇಸ್ರೇಲ್ ಜನಸಮೂಹವು ಸೇರಿಬಂದಿದ್ದಾಗ ಮೋಶೆಯು ಈ ನಿಯಮಗಳನ್ನು ಅವರಿಗೆ ತಿಳಿಸಿದನು. ಆ ಸ್ಥಳವು ಹೆಷ್ಬೋನಿನಲ್ಲಿ ವಾಸವಾಗಿದ್ದ ಅಮೋರಿಯನಾದ ಸೀಹೋನ್ ರಾಜನಿಗೆ ಸೇರಿತ್ತು. (ಮೋಶೆ ಮತ್ತು ಇಸ್ರೇಲರು ಈಜಿಪ್ಟಿನಿಂದ ಹೊರಬಂದಾಗ ಸೀಹೋನನನ್ನು ಸೋಲಿಸಿದ್ದರು.) 47 ಸೀಹೋನನ ರಾಜ್ಯವನ್ನು ಅವರು ತಮ್ಮ ಉಪಯೋಗಕ್ಕಾಗಿ ಸ್ವಾಧೀನ ಮಾಡಿಕೊಂಡರು, ಬಾಷಾನಿನ ರಾಜನಾದ ಓಗನ ರಾಜ್ಯವನ್ನು ತಮ್ಮ ಸ್ವಾಧೀನಪಡಿಸಿಕೊಂಡರು. ಅಮೋರಿಯರಾದ ಈ ಇಬ್ಬರು ರಾಜರುಗಳು ಜೋರ್ಡನ್ ನದಿಯ ಪೂರ್ವದಲ್ಲಿ ವಾಸವಾಗಿದ್ದರು. 48 ಈ ಪ್ರದೇಶವು ಅರ್ನೋನ್ ತಗ್ಗಿನಲ್ಲಿರುವ ಅರೋಯೇರಿನಿಂದ ಹಿಡಿದು ಸೀಯೋನ್ ಎಂಬ ಹೆರ್ಮೋನ್ ಪರ್ವತದ ತನಕ ವಿಸ್ತರಿಸಿಯದೆ. 49 ಈ ಪ್ರದೇಶವು ಜೋರ್ಡನ್ ತಗ್ಗು ಪ್ರಾಂತ್ಯವನ್ನು ಆವರಿಸಿದೆ. ದಕ್ಷಿಣಕ್ಕೆ ಇದರ ಮೇರೆ ಮೃತ ಸರೋವರದ ತನಕವೂ ಪೂರ್ವದಲ್ಲಿ ಪಿಸ್ಗಾ ಬೆಟ್ಟದ ತನಕವೂ ವಿಸ್ತರಿಸಿದೆ.