ದಶಾಜ್ಞೆಗಳು
5
1 ಇಸ್ರೇಲ್ ಸಮೂಹದವರನ್ನೆಲ್ಲಾ ಮೋಶೆ ಒಟ್ಟಾಗಿ ಸೇರಿಸಿ ಅವರಿಗೆ ಹೇಳಿದ್ದೇನೆಂದರೆ: “ಇಸ್ರೇಲ್ ಜನರೇ, ನಾನು ಈ ಹೊತ್ತು ಹೇಳುವ ಕಟ್ಟಳೆಗಳಿಗೆ ಕಿವಿಗೊಡಿರಿ. ಇವುಗಳನ್ನು ಕಲಿತುಕೊಂಡು ಪಾಲಿಸುವವರಾಗಿರಿ.
2 ಹೋರೇಬ್ ಎಂಬ ಸೀನಾಯಿ ಪರ್ವತದಲ್ಲಿ ಯೆಹೋವ ದೇವರು ನಮ್ಮೊಂದಿಗೆ ಒಡಂಬಡಿಕೆಯನ್ನು ಮಾಡಿರುತ್ತಾನೆ.
3 ಯೆಹೋವನು ನಮ್ಮ ಪೂರ್ವಿಕರೊಂದಿಗೆ ಒಡಂಬಡಿಕೆ ಮಾಡದೆ ಈಗ ಇಲ್ಲಿ ಜೀವಂತರಾಗಿರುವ ನಮ್ಮೊಂದಿಗೆ ಮಾಡಿರುತ್ತಾನೆ.
4 ಆ ಪರ್ವತದಲ್ಲಿ ಯೆಹೋವನು ನಿಮ್ಮೊಂದಿಗೆ ಮುಖಾಮುಖಿಯಾಗಿ ಬೆಂಕಿಯೊಳಗಿಂದ ನಿಮ್ಮೊಂದಿಗೆ ಮಾತಾಡಿರುತ್ತಾನೆ.
5 ಆದರೆ ನೀವು ಬೆಂಕಿಗೆ ಭಯಪಟ್ಟಿದ್ದರಿಂದ ಬೆಟ್ಟವನ್ನು ಏರಲಿಲ್ಲ. ಆಗ ನಾನು ನಿಮಗೂ ಯೆಹೋವನಿಗೂ ಮಧ್ಯದಲ್ಲಿದ್ದುಕೊಂಡು ಯೆಹೋವನು ಹೇಳಿದ್ದನ್ನು ತಿಳಿಸಿದೆನು.
6 “ಯೆಹೋವನು ಹೇಳಿದ್ದೇನೆಂದರೆ:
‘ನಾನು ನಿಮ್ಮ ದೇವರಾದ ಯೆಹೋವನು. ನೀವು ಈಜಿಪ್ಟಿನಲ್ಲಿ ಗುಲಾಮರಾಗಿದ್ದಾಗ ನಿಮ್ಮನ್ನು ಅಲ್ಲಿಂದ ಬಿಡುಗಡೆ ಮಾಡಿದೆನು. ಆದ್ದರಿಂದ ನೀವು ಈ ಆಜ್ಞೆಗಳಿಗೆ ವಿಧೇಯರಾಗಬೇಕು:
7 ‘ನೀವು ನನ್ನ ಹೊರತು ಬೇರೆ ಯಾವ ದೇವರುಗಳನ್ನೂ ಪೂಜಿಸಬಾರದು.
8 ‘ನೀವು ವಿಗ್ರಹಗಳನ್ನು ಮಾಡಿಕೊಳ್ಳಬಾರದು. ಆಕಾಶದ ಮೇಲಾಗಲಿ ಭೂಮಿಯ ಮೇಲಾಗಲಿ ಭೂಮಿಯ ಕೆಳಗಿರುವ ನೀರಿನಲ್ಲಾಗಲಿ ಯಾವ ವಸ್ತುಗಳ ವಿಗ್ರಹಗಳನ್ನಾಗಲಿ ಪ್ರತಿಮೆಗಳನ್ನಾಗಲಿ ಮಾಡಿಕೊಳ್ಳಬಾರದು.
9 ನಾನೇ ನಿಮ್ಮ ದೇವರಾದ ಯೆಹೋವನು. ಆದ್ದರಿಂದ ನೀವು ಯಾವ ವಿಗ್ರಹವನ್ನೂ ಪೂಜಿಸಬಾರದು ಮತ್ತು ಅದರ ಸೇವೆ ಮಾಡಬಾರದು. ನನ್ನ ಜನರು ಇತರ ದೇವರುಗಳನ್ನು ಆರಾಧಿಸುವುದನ್ನು ನಾನು ದ್ವೇಷಿಸುತ್ತೇನೆ. ನನಗೆ ವಿರುದ್ಧವಾಗಿ ಪಾಪ ಮಾಡಿದವರನ್ನು ನಾನು ಶಿಕ್ಷಿಸುತ್ತೇನೆ. ಅವರ ಮಕ್ಕಳು, ಮೊಮ್ಮಕ್ಕಳು ಮತ್ತು ಮರಿಮೊಮ್ಮಕ್ಕಳು ನನ್ನ ದಂಡನೆಗೆ ಗುರಿಯಾಗುವರು.
10 ಆದರೆ ನನ್ನನ್ನು ಪ್ರೀತಿಸಿ ನನ್ನ ಆಜ್ಞೆಗಳಿಗೆ ವಿಧೇಯರಾಗುವವರ ಮೇಲೆ ನಾನು ದಯೆ ತೋರಿಸುವೆನು. ಅವರ ಕುಟುಂಬಗಳವರಿಗೆ ಸಾವಿರಾರು ತಲೆಮಾರುಗಳವರೆಗೂ ಕರುಣೆಯನ್ನು ತೋರಿಸುವೆನು.
11 ‘ನಿನ್ನ ದೇವರಾದ ಯೆಹೋವನ ಹೆಸರನ್ನು ಅಯೋಗ್ಯ ಕಾರ್ಯಕ್ಕಾಗಿ ಎತ್ತಬಾರದು. ಯಾರಾದರೂ ಅಯೋಗ್ಯ ಕಾರ್ಯಕ್ಕಾಗಿ ನನ್ನ ಹೆಸರನ್ನು ಉಪಯೋಗಿಸಿದರೆ ನಾನು ಅವನನ್ನು ಶಿಕ್ಷಿಸುವೆನು.
12 ‘ನಿನ್ನ ದೇವರಾದ ಯೆಹೋವನು ಆಜ್ಞಾಪಿಸಿದಂತೆ ಸಬ್ಬತ್ ದಿನವನ್ನು ವಿಶೇಷದಿನವೆಂದು ಪರಿಗಣಿಸಬೇಕು.
13 ವಾರದ ಆರು ದಿನಗಳಲ್ಲಿ ಕೆಲಸಮಾಡಿರಿ.
14 ಆದರೆ ಏಳನೆಯ ದಿನವು ವಿಶ್ರಾಂತಿಯ ದಿನವಾಗಿದೆ. ಆ ದಿನ ಯಾರೂ ಕೆಲಸ ಮಾಡಬಾರದು. ನೀವು ಮಾತ್ರವೇ ಅಲ್ಲ, ನಿಮ್ಮ ಮಕ್ಕಳು, ಸೇವಕರು, ನಿಮ್ಮ ಪಶುಗಳು, ನಿಮ್ಮಲ್ಲಿರುವ ಪರದೇಶಿಯರು ಕೆಲಸಮಾಡದೆ ವಿಶ್ರಾಂತಿಯಲ್ಲಿರಬೇಕು. ನಿಮ್ಮ ದೇವರಾದ ಯೆಹೋವನ ಗೌರವಾರ್ಥವಾಗಿ ಸಬ್ಬತ್ ದಿನವು ವಿಶ್ರಾಂತಿಯ ದಿನವಾಗಿದೆ.
15 ನೀವು ಈಜಿಪ್ಟ್ ದೇಶದಲ್ಲಿ ಗುಲಾಮರಾಗಿದ್ದಿರೆಂಬುದನ್ನು ಮರೆಯಬೇಡಿ. ನಿಮ್ಮ ದೇವರಾದ ಯೆಹೋವನು ತನ್ನ ಮಹಾಶಕ್ತಿಯಿಂದ ನಿಮ್ಮನ್ನು ಈಜಿಪ್ಟಿನಿಂದ ಬಿಡಿಸಿ ನಿಮ್ಮನ್ನು ಸ್ವತಂತ್ರರನ್ನಾಗಿ ಮಾಡಿದನು. ಆದ್ದರಿಂದಲೇ ನಿಮ್ಮ ದೇವರು ಸಬ್ಬತ್ ದಿನವನ್ನು ಆಚರಿಸಬೇಕೆಂದು ಆಜ್ಞೆ ಮಾಡಿದ್ದು.
16 ‘ನಿಮ್ಮ ತಂದೆತಾಯಿಗಳನ್ನು ನೀವು ಸನ್ಮಾನಿಸಬೇಕು. ಇದು ನಿಮ್ಮ ದೇವರ ಆಜ್ಞೆ. ನೀವು ಇದಕ್ಕೆ ವಿಧೇಯರಾದರೆ ದೇವರು ನಿಮಗೆ ಕೊಡುವ ದೇಶದಲ್ಲಿ ನೀವು ಬಹುಕಾಲ ಬಾಳುವಿರಿ ಮತ್ತು ನಿಮಗೆ ಯಾವಾಗಲೂ ಶುಭವಿರುವುದು.
17 ‘ಕೊಲೆ ಮಾಡಬಾರದು.
18 ‘ವ್ಯಭಿಚಾರ ಮಾಡಬಾರದು.
19 ‘ಕದಿಯಬಾರದು.
20 ‘ಇತರರ ವಿಷಯವಾಗಿ ಸುಳ್ಳುಸಾಕ್ಷಿ ಹೇಳಬಾರದು.
21 ‘ಇನ್ನೊಬ್ಬನ ಹೆಂಡತಿಯನ್ನು ಆಶಿಸಬಾರದು. ಅವನ ಮನೆಯನ್ನಾಗಲಿ ಹೊಲವನ್ನಾಗಲಿ ಸೇವಕರನ್ನಾಗಲಿ ದನವನ್ನಾಗಲಿ ಕತ್ತೆಯನ್ನಾಗಲಿ ನೀವು ಅಪೇಕ್ಷಿಸಬಾರದು. ಇನ್ನೊಬ್ಬನ ವಸ್ತುಗಳಲ್ಲಿ ಯಾವುದನ್ನೂ ಆಶಿಸಬಾರದು!’”
ಜನರು ದೇವರಿಗೆ ಹೆದರಿದರು
22 ಮೋಶೆಯು ಹೇಳಿದ್ದೇನೆಂದರೆ: “ನೀವೆಲ್ಲಾ ಆ ಬೆಟ್ಟದ ಬಳಿಯಲ್ಲಿರುವಾಗ ದೇವರಾದ ಯೆಹೋವನು ಈ ಆಜ್ಞೆಗಳನ್ನು ನಿಮಗೆ ಕೊಟ್ಟನು. ಬೆಂಕಿ, ಮೋಡ ಮತ್ತು ಕಾರ್ಗತ್ತಲೊಳಗಿನಿಂದ ಯೆಹೋವನು ಗಟ್ಟಿಯಾದ ಸ್ವರದಲ್ಲಿ ಮಾತಾಡಿದ್ದನ್ನು ನೀವು ಕೇಳಿದಿರಿ. ಆತನು ಈ ಆಜ್ಞೆಗಳನ್ನು ಕೊಟ್ಟ ಬಳಿಕ ಬೇರೆ ಏನನ್ನೂ ಹೇಳಲಿಲ್ಲ. ಆತನು ತನ್ನ ಮಾತುಗಳನ್ನು ಎರಡು ಕಲ್ಲಿನ ಹಲಗೆಗಳ ಮೇಲೆ ಬರೆದು ನನಗೆ ಕೊಟ್ಟನು.
23 “ಬೆಟ್ಟವು ಬೆಂಕಿಯಿಂದ ಉರಿಯುತ್ತಿರುವಾಗ ಕಾರ್ಗತ್ತಲೆಯಿಂದ ಬಂದ ಸ್ವರವನ್ನು ನೀವು ಕೇಳಿದಿರಿ. ಆಗ ನಿಮ್ಮ ಹಿರಿಯರು, ಕುಲಪ್ರಧಾನರು ನನ್ನ ಬಳಿಗೆ ಬಂದು ಹೇಳಿದ್ದೇನೆಂದರೆ:
24 ‘ನಮ್ಮ ದೇವರಾದ ಯೆಹೋವನು ತನ್ನ ಮಹಿಮೆಯನ್ನೂ ಪ್ರತಾಪವನ್ನೂ ನಮಗೆ ತೋರಿಸಿದ್ದಾನೆ. ಬೆಂಕಿಯೊಳಗಿಂದ ಆತನು ಮಾತನಾಡಿದ್ದನ್ನು ನಾವು ಕೇಳಿದ್ದೇವೆ. ದೇವರು ಒಬ್ಬನೊಡನೆ ಸ್ವತಃ ಮಾತನಾಡಿದ ಬಳಿಕವೂ ಅವನು ಜೀವದಿಂದುಳಿಯಲು ಸಾಧ್ಯ ಎಂಬುದನ್ನು ನಾವು ಕಣ್ಣಾರೆ ಕಂಡೆವು.
25 ಆದರೆ ನಮ್ಮ ದೇವರಾದ ಯೆಹೋವನು ಮಾತನಾಡುವುದನ್ನು ನಾವು ಮತ್ತೆ ಕೇಳಿದರೆ ಖಂಡಿತವಾಗಿ ಸಾಯುವೆವು. ಆ ಭಯಂಕರವಾದ ಬೆಂಕಿಯು ನಮ್ಮನ್ನು ದಹಿಸುವುದು. ನಮಗೆ ಸಾಯಲು ಇಷ್ಟವಿಲ್ಲ.
26 ಜೀವಸ್ವರೂಪನಾದ ದೇವರ ನುಡಿಯನ್ನು ಪ್ರತ್ಯಕ್ಷವಾಗಿ ನಾವು ಕೇಳಿದ ಹಾಗೆ ಬೇರೆ ಯಾರೂ ಕೇಳಿಲ್ಲ. ಆದರೂ ನಾವು ಜೀವದಿಂದಿದ್ದೇವೆ.
27 ಮೋಶೆಯೇ, ನೀನು ಹತ್ತಿರ ಹೋಗಿ ಯೆಹೋವನು ಹೇಳುವುದನ್ನೆಲ್ಲಾ ಕೇಳಿ ನಮಗೆ ಅದನ್ನು ತಿಳಿಸು. ನಾವು ನಿನ್ನ ಮಾತುಗಳನ್ನು ಕೇಳಿ ನೀನು ಹೇಳಿದ ಹಾಗೆ ಮಾಡುವೆವು.’
ಯೆಹೋವನು ಮೋಶೆಯ ಸಂಗಡ ಮಾತನಾಡುತ್ತಾನೆ
28 “ನೀವು ಹೇಳಿದ್ದನ್ನು ಯೆಹೋವನು ಕೇಳಿ ನನ್ನೊಡನೆ ಹೀಗೆಂದನು: ‘ನಿನ್ನ ಜನರು ಹೇಳುವುದನ್ನು ನಾನು ಕೇಳಿದೆನು. ಆ ಮಾತುಗಳೆಲ್ಲಾ ಒಳ್ಳೆಯವೇ.
29 ಆದರೆ ಅವರು ಆಲೋಚಿಸುವ ರೀತಿಯನ್ನು ನಾನು ಬದಲಾಯಿಸಬೇಕಾಗಿದೆ. ಅವರು ನನಗೆ ವಿಧೇಯರಾಗಿ ನನ್ನ ಆಜ್ಞೆಗಳನ್ನೆಲ್ಲಾ ಅನುಸರಿಸಿ ತಮ್ಮ ಹೃದಯಗಳಿಂದ ನನ್ನನ್ನು ಗೌರವಿಸಬೇಕು. ಆಗ ಅವರಿಗೂ ಅವರ ಸಂತತಿಯವರಿಗೂ ಶಾಶ್ವತವಾಗಿ ಶುಭವಿರುವುದು.
30 “‘ನೀನು ಹೋಗಿ ಜನರಿಗೆ ಅವರವರ ಗುಡಾರಗಳಿಗೆ ಹಿಂದಿರುಗಿ ಹೋಗಲು ತಿಳಿಸು.
31 ಆದರೆ ಮೋಶೆಯೇ, ನೀನು ನನ್ನ ಬಳಿಯಲ್ಲಿಯೇ ನಿಂತಿರು. ನೀನು ಅವರಿಗೆ ಉಪದೇಶಿಸಬೇಕಾಗಿರುವ ಎಲ್ಲಾ ಆಜ್ಞೆಗಳನ್ನು, ಕಟ್ಟಳೆಗಳನ್ನು ಮತ್ತು ನಿಯಮಗಳನ್ನು ನಾನು ನಿನಗೆ ತಿಳಿಸುತ್ತೇನೆ. ಅವರ ವಾಸಕ್ಕಾಗಿ ನಾನು ಕೊಡಲಿರುವ ದೇಶದಲ್ಲಿ ಅವರು ಇವುಗಳೆಲ್ಲವನ್ನು ಪರಿಪಾಲಿಸಬೇಕು.’
32 “ಆದ್ದರಿಂದ, ಇಸ್ರೇಲ್ ಜನರೇ, ಯೆಹೋವನು ಆಜ್ಞಾಪಿಸಿದ್ದನ್ನೆಲ್ಲಾ ಅನುಸರಿಸಲು ನೀವು ಎಚ್ಚರದಿಂದಿರಬೇಕು. ಆತನನ್ನು ಹಿಂಬಾಲಿಸುವುದನ್ನು ನಿಲ್ಲಿಸಬೇಡಿ.
33 ನಿಮ್ಮ ದೇವರಾದ ಯೆಹೋವನು ಹೇಳಿದ ಆಜ್ಞೆಗಳಿಗನುಸಾರವಾಗಿ ನಡೆದರೆ ನೀವು ಜೀವಿಸುವಿರಿ. ಆಗ ನೀವು ಶುಭವನ್ನೇ ಹೊಂದುವಿರಿ. ನಿಮಗೆ ದೊರಕಿದ ಸ್ವಾಸ್ತ್ಯಭೂಮಿಯಲ್ಲಿ ನೀವು ಬಹುಕಾಲ ಬಾಳುವಿರಿ.