ಸಮಾಧಾನಯಜ್ಞವನ್ನು ಅರ್ಪಿಸುವ ಕ್ರಮ
3
“ಯಾವನಾದರೂ ಸಮಾಧಾನಯಜ್ಞ ಮಾಡಬೇಕಾದರೆ ಅವನು ತನ್ನ ಪಶುಮಂದೆಯಿಂದ ಗಂಡುಪಶುವನ್ನಾಗಲಿ ಹೆಣ್ಣುಪಶುವನ್ನಾಗಲಿ ಅರ್ಪಿಸಬಹುದು. ಯೆಹೋವನ ಎದುರಿನಲ್ಲಿ ಅರ್ಪಿಸಲ್ಪಡುವ ಅದು ಅಂಗದೋಷವಿಲ್ಲದ್ದಾಗಿರಬೇಕು. ಆ ವ್ಯಕ್ತಿಯು ತನ್ನ ಕೈಯನ್ನು ಪಶುವಿನ ತಲೆಯ ಮೇಲಿಟ್ಟು ದೇವದರ್ಶನಗುಡಾರದ ಬಾಗಿಲಲ್ಲಿ ಅದನ್ನು ವಧಿಸಬೇಕು. ಬಳಿಕ ಯಾಜಕರಾದ ಆರೋನನ ಪುತ್ರರು ಆ ರಕ್ತವನ್ನು ಯಜ್ಞವೇದಿಕೆಯ ಮೇಲೆ ಸುತ್ತಲೂ ಚಿಮಿಕಿಸಬೇಕು. 3-4 ಆ ಯಜ್ಞಪಶುವಿನ ವಪೆಯನ್ನೂ ಕರುಳುಗಳ ಮೇಲಿನ ಎಲ್ಲಾ ಕೊಬ್ಬನ್ನೂ ಎರಡು ಮೂತ್ರಪಿಂಡಗಳನ್ನೂ ಇವುಗಳ ಮೇಲೆ ಸೊಂಟದಲ್ಲಿರುವ ಕೊಬ್ಬನ್ನೂ ತೆಗೆದು ಪಿತ್ತಕೋಶದ ಹತ್ತಿರ ಮೂತ್ರಪಿಂಡಗಳವರೆಗೆ ಇರುವ ಕೊಬ್ಬನ್ನೂ ತೆಗೆದು ಯೆಹೋವನಿಗೆ ಹೋಮಮಾಡಬೇಕು. ಬಳಿಕ ಆರೋನನ ಪುತ್ರರು ಕೊಬ್ಬನ್ನು ವೇದಿಕೆಗೆ ತಂದು ಅದನ್ನು ಬೆಂಕಿಯಲ್ಲಿ ಕಟ್ಟಿಗೆಯ ಮೇಲಿರುವ ಸರ್ವಾಂಗಹೋಮದ ಮೇಲಿಡಬೇಕು. ಅದು ಅಗ್ನಿಯ ಮೂಲಕ ಅರ್ಪಿಸುವ ಹೋಮವಾಗಿರುತ್ತದೆ. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ.
“ಒಬ್ಬನು ಕುರಿಯನ್ನಾಗಲಿ ಆಡನ್ನಾಗಲಿ ಯೆಹೋವನಿಗೆ ಸಮಾಧಾನಯಜ್ಞವಾಗಿ ಕೊಡುವಾಗ, ಆ ಪಶುವಿನಲ್ಲಿ ಯಾವ ದೋಷವೂ ಇರಬಾರದು. ಅದು ಗಂಡು ಅಥವಾ ಹೆಣ್ಣಾಗಿರಬಹುದು. ಅವನು ಕುರಿಮರಿಯನ್ನು ಅರ್ಪಿಸುವುದಾದರೆ, ಅದನ್ನು ಯೆಹೋವನ ಸನ್ನಿಧಿಗೆ ತರಬೇಕು. ಅವನು ತನ್ನ ಕೈಯನ್ನು ಪಶುವಿನ ಮೇಲಿಟ್ಟು ದೇವದರ್ಶನಗುಡಾರದ ಮುಂದೆ ಅದನ್ನು ವಧಿಸಬೇಕು. ತರುವಾಯ ಆರೋನನ ಪುತ್ರರು ಅದರ ರಕ್ತವನ್ನು ವೇದಿಕೆಯ ಮೇಲೆ ಸುತ್ತಲೂ ಚಿಮಿಕಿಸಬೇಕು. ಅವನು ಸಮಾಧಾನಯಜ್ಞ ಪಶುವಿನ ಕೊಬ್ಬನ್ನು ಅಂದರೆ ಬಾಲದ ಮೇಲಿರುವ ಕೊಬ್ಬನ್ನು ಕರುಳುಗಳ ಮೇಲಿರುವ ಮತ್ತು ಅವುಗಳ ಸುತ್ತಲಿರುವ ಕೊಬ್ಬನ್ನೆಲ್ಲಾ ಹೋಮಮಾಡಬೇಕು. 10 ಅವನು ಎರಡು ಮೂತ್ರಪಿಂಡಗಳನ್ನೂ ಇವುಗಳ ಮೇಲೆ ಸೊಂಟದಲ್ಲಿರುವ ಕೊಬ್ಬನ್ನೂ ಪಿತ್ತಕೋಶದ ಮೇಲೆ ಮೂತ್ರಪಿಂಡಗಳವರೆಗೆ ಇರುವ ಕೊಬ್ಬನ್ನೂ ಯಾಜಕನು ಯಜ್ಞವೇದಿಕೆಯ ಮೇಲೆ ಹೋಮಮಾಡಬೇಕು. ಸಮಾಧಾನಯಜ್ಞವನ್ನು ಅರ್ಪಿಸುವ ಕ್ರಮ. 11 ಅದು ಯೆಹೋವನಿಗೆ ಬೆಂಕಿಯ ಮೂಲಕ ಅರ್ಪಿಸಿದ ಆಹಾರವಾಗುವುದು.
12 “ಸಮರ್ಪಿಸಲ್ಪಡುವ ಪಶು ಆಡಾಗಿದ್ದರೆ, ಸಮರ್ಪಿಸುವವನು ಅದನ್ನು ಯೆಹೋವನ ಸನ್ನಿಧಿಗೆ ತರಬೇಕು. 13 ಅವನು ತನ್ನ ಕೈಯನ್ನು ಆಡಿನ ತಲೆಯ ಮೇಲಿಟ್ಟು ದೇವದರ್ಶನಗುಡಾರದ ಮುಂದೆ ಅದನ್ನು ವಧಿಸಬೇಕು. ಬಳಿಕ ಆರೋನನ ಗಂಡುಮಕ್ಕಳು ಆಡಿನ ರಕ್ತವನ್ನು ವೇದಿಕೆಯ ಮೇಲೆ ಅದರ ಸುತ್ತಲೂ ಚಿಮಿಕಿಸಬೇಕು. 14 ಅವನು ಸಮಾಧಾನಯಜ್ಞದ ಪಶುವಿನ ವಪೆಯನ್ನೂ ಕರುಳುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ ಎರಡು ಮೂತ್ರಪಿಂಡಗಳನ್ನೂ ಇವುಗಳ ಮೇಲೆ ಸೊಂಟದಲ್ಲಿರುವ ಕೊಬ್ಬನ್ನೂ ಪಿತ್ತಾಶಯದ ಹತ್ತಿರ ಮೂತ್ರಪಿಂಡಗಳ ತನಕ ಇರುವ ಕೊಬ್ಬನ್ನೂ ಯೆಹೋವನಿಗೋಸ್ಕರ ಸಮರ್ಪಿಸಬೇಕು. 15 ಅವನು ಅದರ ಎರಡು ಮೂತ್ರಪಿಂಡಗಳನ್ನು ಮತ್ತು ಸೊಂಟದವರೆಗೆ ಅವುಗಳನ್ನು ಆವರಿಸಿರುವ ಕೊಬ್ಬನ್ನು ಸಮರ್ಪಿಸಬೇಕು. ಅವನು ಪಿತ್ತಾಶಯವನ್ನು ಮತ್ತು ಅದನ್ನು ಅವರಿಸಿರುವ ಕೊಬ್ಬನ್ನು ಸಮರ್ಪಿಸಬೇಕು. ಅವನು ಮೂತ್ರಪಿಂಡಗಳೊಂದಿಗೆ ಪಿತ್ತಾಶಯವನ್ನೂ ಸಮರ್ಪಿಸಬೇಕು. 16 ಬಳಿಕ ಯಾಜಕನು ಅವುಗಳನ್ನು ವೇದಿಕೆಯ ಮೇಲೆ ಹೋಮಮಾಡಬೇಕು. ಇದು ಆಹಾರದ ರೂಪದಲ್ಲಿ ಯೆಹೋವನಿಗೆ ಅರ್ಪಿಸಿದ ಸುವಾಸನೆಯನ್ನು ಉಂಟುಮಾಡುವ ಸಮಾಧಾನಯಜ್ಞವಾಗಿರುತ್ತದೆ. ಆದರೆ ಅದರ ಕೊಬ್ಬು ಯೆಹೋವನಿಗೆ ಸೇರಿದೆ. 17 ನಿಮ್ಮ ಎಲ್ಲಾ ಸಂತತಿಗಳವರಿಗೆ ಈ ನಿಯಮವು ಶಾಶ್ವತವಾದದ್ದು. ನೀವೆಲ್ಲೇ ವಾಸಿಸಿದರೂ ಕೊಬ್ಬನ್ನಾಗಲಿ ರಕ್ತವನ್ನಾಗಲಿ ಎಂದಿಗೂ ತಿನ್ನಬಾರದು.”