ತಿಳಿಯದೆ ಮಾಡಿದ ಪಾಪಗಳ ಪರಿಹಾರಕ್ಕಾಗಿ ಸಮರ್ಪಣೆಗಳು
4
1 ಯೆಹೋವನು ಮೋಶೆಯೊಡನೆ ಮಾತನಾಡಿ ಹೇಳಿದ್ದೇನೆಂದರೆ:
2 “ಇಸ್ರೇಲರಿಗೆ ಹೀಗೆ ಹೇಳು: ಯಾವನಾದರೂ ತಿಳಿಯದೆ ಪಾಪಮಾಡಿದರೆ ಮತ್ತು ಮಾಡಬಾರದೆಂದು ಹೇಳಿದವುಗಳನ್ನು ಮಾಡಿದರೆ, ಅವನು ಮಾಡಬೇಕಾದದ್ದೇನೆಂದರೆ:
3 “ಅಭಿಷಿಕ್ತನಾದ ಯಾಜಕನು ತಪ್ಪುಮಾಡಿ ಜನರೆಲ್ಲರನ್ನು ಅಪರಾಧಕ್ಕೆ ಒಳಪಡಿಸಿದರೆ ತನ್ನ ದೋಷಪರಿಹಾರಕ್ಕಾಗಿ ಅವನು ಪೂರ್ಣಾಂಗವಾದ ಹೋರಿಯನ್ನು ಯೆಹೋವನಿಗೆ ಅರ್ಪಿಸಬೇಕು.
4 ಅಭಿಷಿಕ್ತನಾದ ಯಾಜಕನು ಹೋರಿಯನ್ನು ದೇವದರ್ಶನಗುಡಾರದ ಬಾಗಿಲಿಗೆ ತಂದು ತನ್ನ ಕೈಯನ್ನು ಅದರ ತಲೆಯ ಮೇಲಿಟ್ಟು ಯೆಹೋವನ ಸನ್ನಿಧಿಯಲ್ಲಿ ಅದನ್ನು ವಧಿಸಬೇಕು.
5 ಬಳಿಕ ಅವನು ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ದೇವದರ್ಶನಗುಡಾರದೊಳಗೆ ಹೋಗಬೇಕು.
6 ಯಾಜಕನು ತನ್ನ ಬೆರಳನ್ನು ರಕ್ತದಲ್ಲಿ ಅದ್ದಿ ಮಹಾಪವಿತ್ರಸ್ಥಳದ ಪರದೆಯ ಮುಂಭಾಗದಲ್ಲಿರುವ ಯೆಹೋವನ ಸನ್ನಿಧಿಯಲ್ಲಿ ಏಳು ಸಾರಿ ಚಿಮಿಕಿಸಬೇಕು.
7 ಯಾಜಕನು ಸ್ವಲ್ಪ ರಕ್ತವನ್ನು ಧೂಪವೇದಿಕೆಯ ಮೂಲೆಗಳಿಗೆ ಹಚ್ಚಬೇಕು. (ಈ ವೇದಿಕೆಯು ಯೆಹೋವನ ಸನ್ನಿಧಿಯಲ್ಲಿರುವ ದೇವದರ್ಶನಗುಡಾರದಲ್ಲಿದೆ.) ಯಾಜಕನು ಹೋರಿಯ ರಕ್ತವನ್ನೆಲ್ಲಾ ಸರ್ವಾಂಗಹೋಮ ಮಾಡುವ ವೇದಿಕೆಯ ಬುಡದಲ್ಲಿ ಸುರಿಯಬೇಕು. (ಈ ವೇದಿಕೆಯು ದೇವದರ್ಶನಗುಡಾರದ ಬಾಗಿಲಲ್ಲಿ ಇರುತ್ತದೆ.)
8 ಅವನು ಪಾಪಪರಿಹಾರಕ ಯಜ್ಞಕ್ಕಾಗಿ ತಂದಿರುವ ಹೋರಿಯ ಕೊಬ್ಬನ್ನೆಲ್ಲಾ ತೆಗೆಯಬೇಕು. ಅವನು ಅದರ ಒಳಗಿನ ಭಾಗಗಳ ಮೇಲೆ ಮತ್ತು ಅವುಗಳ ಸುತ್ತಲೂ ಇರುವ ಕೊಬ್ಬನ್ನೂ
9 ಅದರ ಎರಡು ಮೂತ್ರಪಿಂಡಗಳನ್ನೂ ಅವುಗಳ ಸೊಂಟದವರೆಗೆ ಆವರಿಸಿರುವ ಕೊಬ್ಬನ್ನೂ ಪಿತ್ತಾಶಯವನ್ನು ಆವರಿಸಿರುವ ಕೊಬ್ಬನ್ನೂ ತೆಗೆಯಬೇಕು. ಅವನು ಮೂತ್ರಪಿಂಡಗಳೊಡನೆ ಪಿತ್ತಾಶಯವನ್ನೂ ತೆಗೆಯಬೇಕು.
10 ಯಾಜಕನು ಈ ಭಾಗಗಳನ್ನು ಸಮಾಧಾನಯಜ್ಞ ಸಮರ್ಪಣೆಯಲ್ಲಿ ಹೋರಿಯ ಭಾಗಗಳನ್ನು ಅರ್ಪಿಸುವ ರೀತಿಯಲ್ಲಿಯೇ ಅರ್ಪಿಸಬೇಕು. ಯಾಜಕನು ಪಶುವಿನ ಭಾಗಗಳನ್ನು ಸರ್ವಾಂಗಹೋಮಮಾಡುವ ವೇದಿಕೆಯ ಮೇಲೆ ಹೋಮ ಮಾಡಬೇಕು.
11-12 ಆದರೆ ಯಾಜಕನು ಹೋರಿಯ ಚರ್ಮವನ್ನು, ಒಳಗಿನ ಭಾಗಗಳನ್ನು, ದೇಹದ ಕಲ್ಮಶವನ್ನು, ಎಲ್ಲಾ ಮಾಂಸವನ್ನು ಮತ್ತು ತಲೆಕಾಲುಗಳನ್ನು ಹೊರಗೆ ತೆಗೆದುಕೊಂಡು ಪಾಳೆಯದ ಹೊರಗೆ ಬೂದಿಯನ್ನು ಸುರಿಯುವ ವಿಶೇಷ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಕಟ್ಟಿಗೆಯ ಮೇಲಿಟ್ಟು ಬೆಂಕಿಯಲ್ಲಿ ಸುಟ್ಟುಹಾಕಬೇಕು. ಬೂದಿಯನ್ನು ಸುರಿಯುವ ಸ್ಥಳದಲ್ಲಿಯೇ ಅದನ್ನು ಸುಡಬೇಕು.
13 “ಇಸ್ರೇಲರ ಇಡೀ ಜನಾಂಗವೆಲ್ಲಾ ತಿಳಿಯದೆ ಪಾಪಮಾಡುವ ಸ್ಥಿತಿ ಸಂಭವಿಸಬಹುದು. ಯೆಹೋವನು ಮಾಡಬಾರದೆಂದು ಆಜ್ಞಾಪಿಸಿದವುಗಳಲ್ಲಿ ಯಾವುದಾದರೊಂದನ್ನು ಅವರು ಮಾಡಿದರೆ ಅವರು ದೋಷಿಗಳಾಗುವರು.
14 ಆ ಪಾಪದ ಕುರಿತು ಅವರಿಗೆ ತಿಳಿದುಬಂದರೆ ಆಗ ಅವರು ಒಂದು ಹೋರಿಯನ್ನು ಇಡೀ ಜನಾಂಗದ ಪಾಪಪರಿಹಾರ ಮಾಡುವ ಸಮರ್ಪಣೆಯಾಗಿ ಅರ್ಪಿಸಬೇಕು. ಅವರು ಹೋರಿಯನ್ನು ದೇವದರ್ಶನಗುಡಾರಕ್ಕೆ ತರಬೇಕು.
15 ಜನರ ಹಿರಿಯರು ಯೆಹೋವನ ಸನ್ನಿಧಿಯಲ್ಲಿ ತಮ್ಮ ಕೈಗಳನ್ನು ಹೋರಿಯ ತಲೆಯ ಮೇಲಿಡಬೇಕು. ತರುವಾಯ ಒಬ್ಬನು ಯೆಹೋವನ ಸನ್ನಿಧಿಯಲ್ಲಿ ಹೋರಿಯನ್ನು ವಧಿಸಬೇಕು.
16 ಬಳಿಕ ಅಭಿಷಿಕ್ತನಾದ ಯಾಜಕನು ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ದೇವದರ್ಶನಗುಡಾರದೊಳಗೆ ಹೋಗಬೇಕು.
17 ಯಾಜಕನು ತನ್ನ ಬೆರಳನ್ನು ರಕ್ತದಲ್ಲಿ ಅದ್ದಿ ಯೆಹೋವನ ಸನ್ನಿಧಿಯಲ್ಲಿ ತೆರೆಯ ಮುಂದೆ ಏಳು ಸಾರಿ ಚಿಮಿಕಿಸಬೇಕು.
18 ಬಳಿಕ ಯಾಜಕನು ರಕ್ತದಲ್ಲಿ ಸ್ವಲ್ಪವನ್ನು ವೇದಿಕೆಯ ಮೂಲೆಗಳಲ್ಲಿ ಹಾಕಬೇಕು. (ಈ ವೇದಿಕೆಯು ದೇವದರ್ಶನಗುಡಾರದಲ್ಲಿ ಯೆಹೋವನ ಸನ್ನಿಧಿಯಲ್ಲಿ ಇರುತ್ತದೆ.) ಯಾಜಕನು ರಕ್ತವನ್ನೆಲ್ಲಾ ಸರ್ವಾಂಗಹೋಮ ಮಾಡುವ ವೇದಿಕೆಯ ಬುಡದಲ್ಲಿ ಸುರಿದುಬಿಡಬೇಕು. (ಈ ವೇದಿಕೆಯು ದೇವದರ್ಶನ ಗುಡಾರದ ಬಾಗಿಲಲ್ಲಿ ಇರುತ್ತದೆ.)
19 ತರುವಾಯ ಯಾಜಕನು ಪಶುವಿನಿಂದ ಕೊಬ್ಬನ್ನೆಲ್ಲಾ ತೆಗೆದು ಅದನ್ನು ವೇದಿಕೆಯ ಮೇಲೆ ಹೋಮಮಾಡಬೇಕು.
20 ಯಾಜಕನು ಪಾಪಪರಿಹಾರಕ ಯಜ್ಞದ ಹೋರಿಯ ಭಾಗಗಳನ್ನು ಸಮರ್ಪಿಸಿದಂತೆಯೇ ಈ ಭಾಗಗಳನ್ನು ಅರ್ಪಿಸಬೇಕು. ಈ ರೀತಿಯಾಗಿ, ಯಾಜಕನು ಜನರಿಗಾಗಿ ಪ್ರಾಯಶ್ಚಿತ್ತ ಮಾಡುವನು. ಆಗ ದೇವರು ಅವರನ್ನು ಕ್ಷಮಿಸುವನು.
21 ಯಾಜಕನು ಈ ಹೋರಿಯನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿ, ಆ ಮೊದಲನೆಯ ಹೋರಿಯನ್ನು ಸುಟ್ಟುಹಾಕಿದ ಸ್ಥಳದಲ್ಲಿಯೇ ಅದನ್ನು ಸುಡಬೇಕು. ಇದು ಇಡೀ ಸಮೂಹದ ಪಾಪವನ್ನು ಪರಿಹಾರ ಮಾಡುವ ಸಮರ್ಪಣೆಯಾಗಿದೆ.
22 “ಒಬ್ಬ ಅಧಿಪತಿಯು ತನ್ನ ದೇವರಾಗಿರುವ ಯೆಹೋವನು ನಿಷೇಧಿಸಿದವುಗಳಲ್ಲಿ ಯಾವುದಾದರೊಂದನ್ನು ತಿಳಿಯದೆ ಮಾಡಿದರೆ ಅವನು ದೋಷಿಯಾಗುತ್ತಾನೆ.
23 ಅಧಿಪತಿಯು ತನ್ನ ಪಾಪದ ಕುರಿತು ತಿಳಿದುಕೊಂಡರೆ, ಅಂಗದೋಷವಿಲ್ಲದ ಹೋತವನ್ನು ತರಬೇಕು. ಅದು ಅವನ ಕಾಣಿಕೆಯಾಗಿರುವುದು.
24 ಅಧಿಪತಿಯು ತನ್ನ ಕೈಯನ್ನು ಹೋತದ ತಲೆಯ ಮೇಲಿಟ್ಟು ಯೆಹೋವನ ಸನ್ನಿಧಿಯಲ್ಲಿ ಸರ್ವಾಂಗಹೋಮ ಪಶುಗಳನ್ನು ವಧಿಸುವ ಸ್ಥಳದಲ್ಲಿ ಅದನ್ನು ವಧಿಸಬೇಕು. ಅದು ಪಾಪಪರಿಹಾರಕ ಯಜ್ಞವಾಗಿದೆ.
25 ಯಾಜಕನು ಪಾಪಪರಿಹಾರಕ ಯಜ್ಞದ ರಕ್ತದಲ್ಲಿ ಸ್ವಲ್ಪವನ್ನು ತನ್ನ ಬೆರಳಿನಲ್ಲಿ ತೆಗೆದುಕೊಂಡು ಸರ್ವಾಂಗಹೋಮಮಾಡುವ ವೇದಿಕೆಯ ಮೂಲೆಗಳಿಗೆ ಹಚ್ಚಬೇಕು. ಯಾಜಕನು ಉಳಿದ ರಕ್ತವನ್ನು ವೇದಿಕೆಯ ಬುಡದಲ್ಲಿ ಸುರಿದು,
26 ಹೋತದ ಕೊಬ್ಬನ್ನೆಲ್ಲಾ ವೇದಿಕೆಯ ಮೇಲೆ ಹೋಮಮಾಡಬೇಕು. ಅದು ಸಮಾಧಾನಯಜ್ಞವಾಗಿದೆ. ಕೊಬ್ಬನ್ನು ಹೋಮಮಾಡುವಂತೆ ಅದನ್ನು ಹೋಮಮಾಡಬೇಕು. ಹೀಗೆ ಯಾಜಕನು ಅಧಿಪತಿಯನ್ನು ಶುದ್ಧಗೊಳಿಸುವನು. ಆಗ ದೇವರು ಆ ಅಧಿಪತಿಯನ್ನು ಕ್ಷಮಿಸುವನು.
27 “ಸಾಮಾನ್ಯ ಜನರಲ್ಲಿ ಒಬ್ಬನು ಯೆಹೋವನು ನಿಷೇಧಿಸಿದವುಗಳಲ್ಲಿ ಯಾವುದಾದರೊಂದನ್ನು ತಿಳಿಯದೆ ಮಾಡಿದರೆ ಅವನು ದೋಷಿಯಾಗಿದ್ದಾನೆ.
28 ಆ ವ್ಯಕ್ತಿ ತನ್ನ ಪಾಪದ ಕುರಿತು ತಿಳಿದುಕೊಂಡರೆ, ಆಗ ಅವನು ಅಂಗದೋಷವಿಲ್ಲದ ಒಂದು ಆಡನ್ನು ತರಬೇಕು. ಅದು ಅವನ ಪಾಪಪರಿಹಾರಕ ಯಜ್ಞವಾಗಿದೆ. ಅವನು ತಾನು ಮಾಡಿದ ಪಾಪಕ್ಕಾಗಿ ಆಡನ್ನು ತರಬೇಕು.
29 ಅವನು ತನ್ನ ಕೈಯನ್ನು ಅದರ ತಲೆಯ ಮೇಲಿಟ್ಟು ಸರ್ವಾಂಗಹೋಮಮಾಡುವ ಸ್ಥಳದಲ್ಲಿ ಅದನ್ನು ವಧಿಸಬೇಕು.
30 ಬಳಿಕ ಯಾಜಕನು ಅದರ ರಕ್ತದಲ್ಲಿ ಸ್ವಲ್ಪವನ್ನು ತನ್ನ ಬೆರಳಿನಲ್ಲಿ ತೆಗೆದುಕೊಂಡು ಸರ್ವಾಂಗಹೋಮ ಮಾಡುವ ವೇದಿಕೆಯ ಮೂಲೆಗಳಿಗೆ ಹಚ್ಚಬೇಕು. ಬಳಿಕ ಯಾಜಕನು ಆಡಿನ ಉಳಿದ ರಕ್ತವನ್ನು ವೇದಿಕೆಯ ಬುಡದಲ್ಲಿ ಸುರಿಯಬೇಕು.
31 ಯಾಜಕನು ಸಮಾಧಾನಯಜ್ಞಗಳಲ್ಲಿ ಕೊಬ್ಬನ್ನು ಪ್ರತ್ಯೇಕಿಸಿದಂತೆಯೇ ಆಡಿನ ಕೊಬ್ಬನ್ನೆಲ್ಲಾ ಪ್ರತ್ಯೇಕಿಸಿ ಅದನ್ನು ಯೆಹೋವನಿಗೆ ಸುಗಂಧವಾಸನೆಯ ಹೋಮವಾಗಿ ವೇದಿಕೆಯ ಮೇಲೆ ಅರ್ಪಿಸಬೇಕು. ಹೀಗೆ ಯಾಜಕನು ಆ ವ್ಯಕ್ತಿಯನ್ನು ಶುದ್ಧಿಗೊಳಿಸುವನು. ಆಗ ದೇವರು ಆ ವ್ಯಕ್ತಿಯನ್ನು ಕ್ಷಮಿಸುವನು.
32 “ಆ ವ್ಯಕ್ತಿಯು ಕುರಿಮರಿಯನ್ನು ತನ್ನ ಪಾಪಪರಿಹಾರಕ ಯಜ್ಞವಾಗಿ ತರುವುದಾದರೆ ಅದು ದೋಷವಿಲ್ಲದ ಹೆಣ್ಣು ಕುರಿಮರಿಯಾಗಿರಬೇಕು.
33 ಅವನು ತನ್ನ ಕೈಯನ್ನು ಅದರ ತಲೆಯ ಮೇಲಿಟ್ಟು ಅದನ್ನು ಸರ್ವಾಂಗಹೋಮದ ಯಜ್ಞಪಶುಗಳನ್ನು ವಧಿಸುವ ಸ್ಥಳದಲ್ಲಿ ಪಾಪಪರಿಹಾರಕಯಜ್ಞವಾಗಿ ವಧಿಸಬೇಕು.
34 ಯಾಜಕನು ಪಾಪಪರಿಹಾರಕಯಜ್ಞದ ರಕ್ತದಲ್ಲಿ ಸ್ವಲ್ಪವನ್ನು ತನ್ನ ಬೆರಳಿನಲ್ಲಿ ತೆಗೆದುಕೊಂಡು ಸರ್ವಾಂಗಹೋಮ ಮಾಡುವ ವೇದಿಕೆಯ ಮೂಲೆಗಳಿಗೆ ಹಚ್ಚಬೇಕು. ಬಳಿಕ ಯಾಜಕನು ಕುರಿಮರಿಯ ರಕ್ತವನ್ನೆಲ್ಲಾ ವೇದಿಕೆಯ ಬುಡದಲ್ಲಿ ಸುರಿಯಬೇಕು.
35 ಯಾಜಕನು ಸಮಾಧಾನಯಜ್ಞಗಳಲ್ಲಿ ಕುರಿಮರಿಯ ಕೊಬ್ಬನ್ನು ಪ್ರತ್ಯೇಕಿಸಿದಂತೆಯೇ ಈ ಕುರಿಮರಿಯ ಕೊಬ್ಬನ್ನೆಲ್ಲಾ ಪ್ರತ್ಯೇಕಿಸಿ ಅದನ್ನು ಅಗ್ನಿಯ ಮೂಲಕ ಯೆಹೋವನಿಗೆ ಅರ್ಪಿಸುವ ಸಮರ್ಪಣೆಯಂತೆ ವೇದಿಕೆಯ ಮೇಲೆ ಹೋಮಮಾಡಬೇಕು. ಹೀಗೆ ಯಾಜಕನು ಆ ವ್ಯಕ್ತಿಯನ್ನು ಅವನು ಮಾಡಿದ ಪಾಪದಿಂದ ಶುದ್ಧಿಗೊಳಿಸುವನು. ಆಗ ದೇವರು ಆ ವ್ಯಕ್ತಿಯನ್ನು ಕ್ಷಮಿಸುವನು.