15
ಸಮಾಧಾನದ ಉತ್ತರ ಕೋಪವನ್ನು ಕಡಿಮೆ ಮಾಡುವುದು; ಒರಟು ಉತ್ತರ ಕೋಪವನ್ನು ಹೆಚ್ಚಿಸುವುದು.
ಜ್ಞಾನಿಯ ಮಾತನ್ನು ಜನರು ಕೇಳಬಯಸುತ್ತಾರೆ. ಮೂಢನು ಕೇವಲ ಮೂರ್ಖತನವನ್ನೇ ಮಾತಾಡುವನು.
ಯೆಹೋವನ ದೃಷ್ಟಿಗೆ ಪ್ರತಿಯೊಂದೂ ಕಾಣುತ್ತದೆ. ಆತನು ಕೆಡುಕರನ್ನೂ ಒಳ್ಳೆಯವರನ್ನೂ ಗಮನಿಸುತ್ತಿದ್ದಾನೆ.
ಹಿತನುಡಿಗಳು ಜೀವವುಳ್ಳ ಮರದಂತಿವೆ. ಸುಳ್ಳು ಮಾತುಗಳು ಮನುಷ್ಯನ ಆತ್ಮವನ್ನು ಜಜ್ಜಿಹಾಕುತ್ತವೆ.
ಮೂರ್ಖನು ತಂದೆಯ ಬುದ್ಧಿಮಾತನ್ನು ತಿರಸ್ಕರಿಸುವನು. ಬುದ್ಧಿಮಾತನ್ನು ಸ್ವೀಕರಿಸಿಕೊಳ್ಳುವವನು ಜ್ಞಾನಿಯಾಗುತ್ತಾನೆ.
ಒಳ್ಳೆಯವರ ಮನೆಗಳಲ್ಲಿ ಬಹಳ ಐಶ್ವರ್ಯವಿರುತ್ತದೆ. ಕೆಡುಕರ ಸಂಪಾದನೆಯಾದರೋ ಆಪತ್ತನ್ನು ಬರಮಾಡುತ್ತದೆ.
ಜ್ಞಾನಿಯ ಮಾತುಗಳು ತಿಳುವಳಿಕೆಯನ್ನು ಹರಡುತ್ತವೆ. ಮೂಢರ ಮಾತುಗಳು ಕೇಳಲು ಯೋಗ್ಯವಲ್ಲ.
ಕೆಡುಕರ ಕಾಣಿಕೆಯನ್ನು ಯೆಹೋವನು ದ್ವೇಷಿಸುವನು; ಒಳ್ಳೆಯವರ ಪ್ರಾರ್ಥನೆಯನ್ನು ಸಂತೋಷದಿಂದ ಕೇಳುವನು.
ದುಷ್ಟರ ಜೀವಿತವು ಯೆಹೋವನಿಗೆ ಅಸಹ್ಯ. ಒಳ್ಳೆಯದನ್ನು ಮಾಡಲಿಚ್ಛಿಸುವವರು ಯೆಹೋವನಿಗೆ ಪ್ರಿಯ.
10 ನೀತಿಮಾರ್ಗವನ್ನು ತೊರೆದವರಿಗೆ ಮಹಾದಂಡನೆಯಾಗುವುದು; ಶಿಕ್ಷಣ, ಗದರಿಕೆಯನ್ನು ದ್ವೇಷಿಸುವವನು ನಾಶವಾಗುವನು.
11 ಮೃತ್ಯುಲೋಕದಲ್ಲಿ ನಡೆಯುತ್ತಿರುವುದು ಯೆಹೋವನಿಗೆ ತಿಳಿದಿದೆ. ಜನರ ಹೃದಯಗಳಲ್ಲಿರುವ ಆಲೋಚನೆಗಳು ಸಹ ಆತನಿಗೆ ಗೊತ್ತಿವೆ.
12 ಮೂಢನು ತನ್ನ ತಪ್ಪನ್ನು ಬೇರೆಯವರಿಂದ ಕೇಳಲು ಇಷ್ಟಪಡನು. ಮೂಢನು ಉಪದೇಶಕ್ಕಾಗಿ ಜ್ಞಾನಿಗಳ ಬಳಿಗೆ ಹೋಗುವುದಿಲ್ಲ.
13 ಸಂತೋಷವಾಗಿರುವವನ ಮುಖದಲ್ಲಿ ಆನಂದ ಎದ್ದುಕಾಣುವುದು. ದುಃಖಗೊಂಡಿರುವವನ ಆತ್ಮದಲ್ಲಿ ವ್ಯಥೆ ಎದ್ದುಕಾಣುವುದು.
14 ವಿವೇಕಿಯು ಮತ್ತಷ್ಟು ತಿಳುವಳಿಕೆಯನ್ನು ಪಡೆದುಕೊಳ್ಳಲು ಪ್ರಯತ್ನಿಸುವನು. ಮೂಢನು ಮತ್ತಷ್ಟು ಮೂಢತನವನ್ನು ಬಯಸುತ್ತಾನೆ.
15 ಬಡಜನರ ದಿನಗಳೆಲ್ಲಾ ದುಃಖಕರ. ಸಂತೋಷದ ಹೃದಯದಲ್ಲಿ ಸದಾ ಔತಣ.
16 ಬಹಳ ಐಶ್ವರ್ಯವನ್ನು ಹೊಂದಿದ್ದು ಸಮಾಧಾನವಿಲ್ಲದೆ ಇರುವುದಕ್ಕಿಂತ ಸ್ವಲ್ಪ ಐಶ್ವರ್ಯವನ್ನು ಹೊಂದಿದ್ದು ಯೆಹೋವನಲ್ಲಿ ಭಯಭಕ್ತಿಯಿಂದಿರುವುದೇ ಮೇಲು.
17 ದ್ವೇಷವಿರುವಲ್ಲಿ ಹೆಚ್ಚಾಗಿ ತಿನ್ನುವುದಕ್ಕಿಂತಲೂ ಪ್ರೀತಿಯಿರುವಲ್ಲಿ ಸ್ವಲ್ಪ ತಿನ್ನುವುದೇ ಉತ್ತಮ.
18 ಮುಂಗೋಪಿಯು ಜಗಳವನ್ನು ಎಬ್ಬಿಸುವನು. ತಾಳ್ಮೆಯುಳ್ಳವನು ಶಾಂತಿ ಸ್ಥಾಪಿಸುವನು.
19 ಸೋಮಾರಿಗೆ ಎಲ್ಲೆಲ್ಲೂ ತೊಂದರೆ, ಯಥಾರ್ಥವಂತರಿಗೆ ಜೀವನ ಸರಾಗ.
20 ಜ್ಞಾನಿಯಾದ ಮಗನಿಂದ ತಂದೆಗೆ ಸಂತೋಷ. ಮೂಢನಾದರೋ ತನ್ನ ತಾಯಿಯನ್ನು ಕಡೆಗಣಿಸುವನು.
21 ಮೂಢನಿಗೆ ಮೂಢತನದಲ್ಲಿ ಸಂತೋಷ. ಜ್ಞಾನಿಯು ಎಚ್ಚರಿಕೆಯಿಂದಿದ್ದು ಒಳ್ಳೆಯದನ್ನು ಮಾಡುವನು.
22 ಆಲೋಚನೆಯಿಲ್ಲದ ಯೋಜನೆಗಳು ವಿಫಲವಾಗುತ್ತವೆ. ಆಲೋಚಿಸಿ ಮಾಡಿದ ಯೋಜನೆಗಳು ಯಶಸ್ವಿಯಾಗುತ್ತವೆ.
23 ಸಮರ್ಪಕವಾದ ಉತ್ತರ ಸಂತೋಷವನ್ನು ಉಂಟುಮಾಡುವುದು; ತಕ್ಕ ಸಮಯದಲ್ಲಿ ಸಮಯೋಚಿತವಾದ ಮಾತು ಅತ್ಯುತ್ತಮ.
24 ಜ್ಞಾನಿಯ ಕಾರ್ಯಗಳು ಅವನನ್ನು ಯಶಸ್ಸಿಗೆ ನಡೆಸುತ್ತವೆ; ಅವು ಅವನನ್ನು ಮರಣದ ಹಾದಿಯಿಂದ ತಪ್ಪಿಸುತ್ತವೆ.
25 ಅಹಂಕಾರಿಗಳ ಆಸ್ತಿಯನ್ನು ಯೆಹೋವನು ನಾಶಗೊಳಿಸುತ್ತಾನೆ; ಆದರೆ ವಿಧವೆಯರ ಆಸ್ತಿಯನ್ನು ಕಾಪಾಡುವನು.
26 ಯೆಹೋವನು ದುರಾಲೋಚನೆಗಳನ್ನು ದ್ವೇಷಿಸುವನು; ಕನಿಕರದ ಮಾತುಗಳಲ್ಲಾದರೋ ಸಂತೋಷಪಡುವನು.
27 ದುರಾಶೆಪಡುವವನು ತನ್ನ ಕುಟುಂಬಕ್ಕೆ ಆಪತ್ತನ್ನು ಬರಮಾಡಿಕೊಳ್ಳುವನು. ಲಂಚ ತೆಗೆದುಕೊಳ್ಳದವನಿಗೆ ಯಾವ ಸಮಸ್ಯೆಯೂ ಇರುವುದಿಲ್ಲ.
28 ಒಳ್ಳೆಯವರು ಎಚ್ಚರಿಕೆಯಿಂದ ಯೋಚಿಸಿ ಉತ್ತರ ಕೊಡುವರು. ದುಷ್ಟರಾದರೋ ಯೋಚಿಸದೆ ಮಾತಾಡುವರು; ಅದರಿಂದ ಜನರಿಗೆ ಕೇವಲ ತೊಂದರೆಯಷ್ಟೇ.
29 ಯೆಹೋವನು ದುಷ್ಟರಿಗೆ ಬಹುದೂರ. ಶಿಷ್ಟರ ಪ್ರಾರ್ಥನೆಯನ್ನಾದರೋ ಆತನು ಯಾವಾಗಲೂ ಕೇಳುತ್ತಾನೆ.
30 ನಗುಮುಖವು ಜನರನ್ನು ಸಂತೋಷಗೊಳಿಸುವುದು; ಒಳ್ಳೆಯ ಸುದ್ದಿಯಿಂದ ಜನರ ಆರೋಗ್ಯ ಹೆಚ್ಚುವುದು.
31 ತನ್ನ ತಪ್ಪನ್ನು ಎಚ್ಚರಿಕೆಯಿಂದ ಕೇಳುವವನು ಬಹು ಜ್ಞಾನಿ.
32 ಶಿಕ್ಷೆಯನ್ನು ಒಪ್ಪದವನು ತನಗೇ ಕೇಡುಮಾಡಿಕೊಳ್ಳುತ್ತಾನೆ. ಗದರಿಕೆಯನ್ನು ಕೇಳುವವನು ತಿಳುವಳಿಕೆಯನ್ನು ಪಡೆದುಕೊಳ್ಳುವನು.
33 ಯೆಹೋವನಲ್ಲಿ ಭಯಭಕ್ತಿಯುಳ್ಳವನು ಜ್ಞಾನಿಯಾಗುತ್ತಿದ್ದಾನೆ. ಸನ್ಮಾನ ಹೊಂದಬೇಕೆನ್ನುವವನು ಮೊದಲು ದೀನನಾಗಿರಬೇಕು.