16
1 ಜನರು ತಾವು ಹೇಳಬೇಕಾದದ್ದನ್ನು ಆಲೋಚಿಸಿಕೊಂಡರೂ ನಾಲಿಗೆಗೆ ತಕ್ಕ ಮಾತುಗಳನ್ನು ಕೊಡುವವನು ಯೆಹೋವನೇ.
2 ಜನರು ತಮ್ಮ ಕಾರ್ಯಗಳೆಲ್ಲಾ ಸರಿಯೆಂದು ಆಲೋಚಿಸಿಕೊಂಡರೂ ಅವುಗಳ ಉದ್ದೇಶಕ್ಕನುಸಾರವಾಗಿ ತೀರ್ಪು ಕೊಡುವವನು ಯೆಹೋವನೇ.
3 ನಿಮ್ಮ ಕಾರ್ಯಗಳನ್ನು ಯೆಹೋವನಿಗೆ ವಹಿಸಿರಿ; ಆಗ ನಿಮ್ಮ ಯೋಜನೆಗಳೆಲ್ಲಾ ಸಫಲವಾಗುವವು.
4 ಯೆಹೋವನು ಪ್ರತಿಯೊಂದನ್ನು ತನ್ನ ಉದ್ದೇಶಕ್ಕನುಸಾರವಾಗಿ ಮಾಡಿದ್ದಾನೆ. ಆತನು ಕೆಡುಕನನ್ನೂ ನಾಶನದ ದಿನಕ್ಕಾಗಿ ಇಟ್ಟಿದ್ದಾನೆ.
5 ಗರ್ವಿಷ್ಠರು ಯೆಹೋವನಿಗೆ ಅಸಹ್ಯ. ಆ ಗರ್ವಿಷ್ಠರಿಗೆ ಯೆಹೋವನ ದಂಡನೆ ಖಂಡಿತ.
6 ಪ್ರೀತಿ ಮತ್ತು ನಂಬಿಗಸ್ತಿಕೆಗಳು ದೋಷಕ್ಕೆ ಪ್ರಾಯಶ್ಚಿತ್ತವಾಗಿವೆ. ಯೆಹೋವನಲ್ಲಿ ಭಯಭಕ್ತಿಯಿಂದಿರಿ, ಆಗ ನೀವು ದುಷ್ಟತನದಿಂದ ದೂರವಾಗುವಿರಿ.
7 ಯೆಹೋವನ ಚಿತ್ತಕ್ಕನುಸಾರವಾಗಿ ಜೀವಿಸುವವನು ತನ್ನ ವೈರಿಗಳೊಡನೆಯೂ ಸಮಾಧಾನದಿಂದಿರುವನು.
8 ಅನ್ಯಾಯದಿಂದ ಹೆಚ್ಚು ಸಂಪಾದಿಸುವುದಕ್ಕಿಂತ ನ್ಯಾಯವಾಗಿ ಸ್ವಲ್ಪ ಸಂಪಾದಿಸುವುದೇ ಉತ್ತಮ.
9 ಒಬ್ಬನು ಅನೇಕ ಯೋಜನೆಗಳನ್ನು ಮಾಡಿಕೊಂಡರೂ ಭವಿಷ್ಯತ್ತನ್ನು ನಿರ್ಧರಿಸುವವನು ಯೆಹೋವನೇ.
10 ರಾಜನ ಮಾತು ದೇವರಿಂದ ಬಂದ ಸಂದೇಶದಂತಿದೆ. ಅವನ ತೀರ್ಮಾನ ಯಾವಾಗಲೂ ನ್ಯಾಯವಾಗಿರಬೇಕು.
11 ಎಲ್ಲಾ ನ್ಯಾಯವಾದ ಅಳತೆಮಾಪಕಗಳು ಮತ್ತು ತಕ್ಕಡಿಗಳು ಯೆಹೋವನಿಗೆ ಇಷ್ಟ. ನ್ಯಾಯವಾದ ಒಪ್ಪಂದವು ಆತನಿಗೆ ಇಷ್ಟ.
12 ರಾಜನು ಕೆಟ್ಟದ್ದನ್ನು ಸಹಿಸಲಾರನು; ಯಾಕೆಂದರೆ ಒಳ್ಳೆಯದರಿಂದಲೇ ಅವನ ರಾಜ್ಯಕ್ಕೆ ಬಲ.
13 ರಾಜರಿಗೆ ಸತ್ಯವನ್ನು ಕೇಳಲು ಇಷ್ಟ, ಸುಳ್ಳಾಡದ ಜನರೂ ಇಷ್ಟ.
14 ರಾಜನು ಕೋಪದಿಂದಿರುವಾಗ ಯಾರನ್ನಾದರೂ ಕೊಂದರೂ ಕೊಲ್ಲಬಹುದು. ಆದರೆ ಜ್ಞಾನಿಯು ಆತನ ಕೋಪವನ್ನು ಶಮನಗೊಳಿಸಬಲ್ಲನು.
15 ರಾಜನು ಸಂತೋಷದಿಂದಿರುವಾಗ ಎಲ್ಲರ ಜೀವನವು ಉತ್ತಮವಾಗಿರುವುದು. ರಾಜನು ನಿನ್ನನ್ನು ಮೆಚ್ಚಿಕೊಂಡರೆ, ಅದು ನಿನ್ನ ಪಾಲಿಗೆ ಮೋಡದಿಂದ ಸುರಿಯುವ ಮುಂಗಾರು ಮಳೆಯಂತಿರುವುದು.
16 ಜ್ಞಾನ ಸಂಪಾದನೆಯು ಬಂಗಾರ ಸಂಪಾದನೆಗಿಂತಲೂ ಶ್ರೇಷ್ಠ. ವಿವೇಕ ಸಂಪಾದನೆಯು ಬೆಳ್ಳಿ ಸಂಪಾದನೆಗಿಂತಲೂ ಉತ್ತಮ.
17 ನೀತಿವಂತರ ಜೀವಿತವು ದುಷ್ಟತನದಿಂದ ದೂರವಾಗಿರುವುದು. ತನ್ನ ಜೀವಿತದ ಬಗ್ಗೆ ಎಚ್ಚರಿಕೆಯುಳ್ಳವನು ತನ್ನ ಪ್ರಾಣವನ್ನು ಕಾಪಾಡಿಕೊಳ್ಳುವನು.
18 ಅಹಂಕಾರಿಯು ನಾಶನದ ಅಪಾಯದಲ್ಲಿದ್ದಾನೆ. ದುರಾಭಿಮಾನಿಯು ಸೋಲಿನ ಅಪಾಯದಲ್ಲಿದ್ದಾನೆ.
19 ಗರ್ವಿಷ್ಠರೊಡನೆ ಐಶ್ವರ್ಯವನ್ನು ಹಂಚಿಕೊಳ್ಳುವದಕ್ಕಿಂತ ದೀನರಾಗಿದ್ದು ಬಡಜನರೊಡನೆ ವಾಸಿಸುವುದೇ ಉತ್ತಮ.
20 ಉಪದೇಶವನ್ನು ಗಮನವಿಟ್ಟು ಕೇಳುವವನು ಅದರ ಲಾಭ ಹೊಂದುವನು; ಯೆಹೋವನಲ್ಲಿ ಭರವಸೆ ಇಡುವವನು ಆಶೀರ್ವಾದ ಹೊಂದುವನು.
21 ಜ್ಞಾನಿಯನ್ನು ಅವನ ಜ್ಞಾನದಿಂದಲೇ ಜನರು ಗುರುತಿಸುವರು. ಎಚ್ಚರಿಕೆಯಿಂದ ಮಾತಾಡುವವನು ಒಡಂಬಡಿಸುವನು.
22 ವಿವೇಕವು ವಿವೇಕಿಗಳಿಗೆ ನಿಜಜೀವವನ್ನು ಕೊಡುತ್ತದೆ. ಆದರೆ ಮೂಢರು ತಮ್ಮ ಮೂಢತನದಿಂದಲೇ ದಂಡಿಸಲ್ಪಡುವರು.
23 ಜ್ಞಾನಿಯ ಹೃದಯವು ಅವನ ಬಾಯಿಗೆ ಮಾರ್ಗದರ್ಶನ. ಅವನ ಮಾತುಗಳು ಒಳ್ಳೆಯದಾಗಿವೆ; ಕೇಳಲು ಯೋಗ್ಯವಾಗಿವೆ.
24 ಸವಿನುಡಿಗಳು ಜೇನಿನಂತಿವೆ. ಅವು ಸ್ವೀಕಾರಕ್ಕೆ ಸುಲಭ; ಆರೋಗ್ಯಕ್ಕೆ ಉಪಯುಕ್ತ.
25 ಮನುಷ್ಯದೃಷ್ಟಿಗೆ ಸರಳವಾಗಿ ತೋರುವ ಒಂದು ಮಾರ್ಗವಿದೆ; ಆದರೆ ಅದರ ಅಂತ್ಯವು ಮರಣ.
26 ಕೆಲಸಗಾರನನ್ನು ಅವನ ಹೊಟ್ಟೆಯೇ ದುಡಿಮೆಯಲ್ಲಿ ತೊಡಗಿಸುತ್ತದೆ. ಅವನ ಹಸಿವೇ ಊಟಕ್ಕಾಗಿ ಅವನನ್ನು ದುಡಿಸುತ್ತದೆ.
27 ನೀಚನು ಕೆಟ್ಟಕಾರ್ಯಗಳನ್ನು ಆಲೋಚಿಸಿಕೊಳ್ಳುವನು. ಅವನ ಮಾತುಗಳು ಬೆಂಕಿಯಂತೆ ನಾಶಕರ.
28 ಕೆಡುಕನು ಜಗಳ ಎಬ್ಬಿಸುವನು; ಗಾಳಿಸುದ್ದಿಯನ್ನು ಹಬ್ಬಿಸುವವನು ಆಪ್ತಸ್ನೇಹಿತರಲ್ಲಿ ಒಡಕು ಉಂಟುಮಾಡುವನು.
29 ಕೆಡುಕನು ತನ್ನ ಸ್ನೇಹಿತರನ್ನೇ ಮೋಸಗೊಳಿಸಿ ನಾಶನಕ್ಕೆ ನಡೆಸುವನು.
30 ಕಣ್ಣುಮಿಟುಕಿಸಿ ನಗುವವನು ತಪ್ಪಾದ ಹಾಗೂ ಕೆಟ್ಟಕಾರ್ಯವೆಸಗಲು ಯೋಜಿಸುತ್ತಿರುವನು.
31 ಒಳ್ಳೆಯವರಿಗೆ ಅವರ ನರೆಕೂದಲೇ ವೈಭವದ ಕಿರೀಟ.
32 ಶೂರನಾಗಿರುವುದಕ್ಕಿಂತ ತಾಳ್ಮೆಯಿಂದಿರುವುದೇ ಶ್ರೇಷ್ಠ; ಪಟ್ಟಣವನ್ನು ವಶಪಡಿಸಿಕೊಳ್ಳುವುದಕ್ಕಿಂತ ನಿಮ್ಮ ಕೋಪವನ್ನು ಸ್ವಾಧೀನದಲ್ಲಿಟ್ಟುಕೊಳ್ಳವುದೇ ಉತ್ತಮ.
33 ಜನರು ಚೀಟುಹಾಕಿ ನಿರ್ಧಾರ ಮಾಡಿದರೂ ಆ ನಿರ್ಧಾರಗಳು ಬರುವುದು ಯೆಹೋವನಿಂದಲೇ.