30
ಇಸ್ರಾಯೇಲಿನ ಪುನರುದ್ಧಾರ
ಯೆರೆಮೀಯನಿಗೆ ಯೆಹೋವ ದೇವರಿಂದ ಉಂಟಾದ ವಾಕ್ಯವೇನೆಂದರೆ, “ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನಾನು ನಿನಗೆ ಹೇಳಿದ ವಾಕ್ಯಗಳನ್ನೆಲ್ಲಾ ಒಂದು ಪುಸ್ತಕದಲ್ಲಿ ನೀನು ಬರೆದಿಡು. ಏಕೆಂದರೆ, ದಿನಗಳು ಬರುವವು,’ ಎಂದು ಯೆಹೋವ ದೇವರು ಹೇಳುತ್ತಾರೆ. ‘ಆಗ ನಾನು ನನ್ನ ಜನರಾದ ಇಸ್ರಾಯೇಲ್ ಹಾಗು ಯೆಹೂದದ ಸೆರೆಯವರನ್ನು ತಿರುಗಿ ಬರಮಾಡುತ್ತೇನೆ. ಆಗ ನಾನು ಅವರ ಪಿತೃಗಳಿಗೆ ಕೊಟ್ಟ ದೇಶಕ್ಕೆ ಅವರನ್ನು ತಿರುಗಿ ಬರಮಾಡುತ್ತೇನೆ. ಅವರು ಅದನ್ನು ಸ್ವಾಧೀನಮಾಡಿಕೊಳ್ಳುವರು,’ ಎಂದು ಯೆಹೋವ ದೇವರು ಹೇಳುತ್ತಾರೆ.”
ಯೆಹೋವ ದೇವರು ಇಸ್ರಾಯೇಲನ್ನೂ, ಯೆಹೂದವನ್ನೂ ಕುರಿತು ಹೇಳಿದ ವಾಕ್ಯಗಳು ಇವೇ, “ಯೆಹೋವ ದೇವರು ಹೀಗೆ ಹೇಳುತ್ತಾರೆ:
“ ‘ನಾವು ನಡುಗುವಿಕೆಯ ಮತ್ತು
ಭಯದ ಧ್ವನಿಯನ್ನು ಕೇಳಿದ್ದೇವೆಯೇ ಹೊರತು, ಸಮಾಧಾನದ್ದಲ್ಲ.
ಈಗ ವಿಚಾರಿಸಿ ನೋಡಿರಿ.
ಪುರುಷನು ಮಗುವನ್ನು ಹೆರಬಲ್ಲನೇ.
ನಾನು ಏಕೆ ಪುರುಷರೆಲ್ಲರೂ ಪ್ರಸವವೇದನೆ ಪಡುವ ಸ್ತ್ರೀಯ ಹಾಗೆ
ನಡುವಿನ ಮೇಲಕ್ಕೆ ಕೈ ಇಟ್ಟವರ ಹಾಗೆ ನೋಡುತ್ತೇನೆ;
ಏಕೆ ಮುಖಗಳೆಲ್ಲಾ ಕಳೆಗುಂದಿದವು?
ಅಯ್ಯೋ, ಈ ದಿನವು ಘೋರವಾದದ್ದು,
ಅದಕ್ಕೆ ಎಣೆ ಇಲ್ಲ;
ಅದು ಯಾಕೋಬ್ಯರಿಗೆ ಇಕ್ಕಟ್ಟಿನ ದಿನ;
ಆದರೂ ಅವರು ಅದರಿಂದ ಪಾರಾಗುವರು.’
 
“ಸೇನಾಧೀಶ್ವರ ಯೆಹೋವ ದೇವರು ಇಂತೆನ್ನುತ್ತಾರೆ,
‘ನಾನು ಆ ದಿನದಲ್ಲಿ ಅವನು ಹೇರಿದ ನೊಗವನ್ನು ಅವರ ಹೆಗಲಿನಿಂದ ಮುರಿದು ಬಿಟ್ಟು,
ಬಂಧನಗಳನ್ನು ಕಿತ್ತು ಹಾಕುವೆನು;
ಇನ್ನು ವಿದೇಶಿಯರು ಅವರನ್ನು ಗುಲಾಮರನ್ನಾಗಿ ಮಾಡಿಕೊಳ್ಳಲಾರರು.
ಆದರೆ ಅವರು ತಮ್ಮ ದೇವರಾದ ಯೆಹೋವ ದೇವರಿಗೂ,
ನಾನು ಅವರಿಗೋಸ್ಕರ ಎಬ್ಬಿಸುವ
ಅವರ ಅರಸನಾದ ದಾವೀದನಿಗೂ ಸೇವೆಮಾಡುವರು.
 
10 “ ‘ಆದ್ದರಿಂದ ನನ್ನ ಸೇವಕನಾದ ಯಾಕೋಬನೇ ಭಯಪಡಬೇಡ,
ಇಸ್ರಾಯೇಲೇ ಹೆದರಬೇಡ,’
ಎಂದು ಯೆಹೋವ ದೇವರು ಹೇಳುತ್ತಾರೆ.
‘ಏಕೆಂದರೆ ಇಗೋ, ನಾನು ನಿನ್ನನ್ನು ದೂರದಿಂದಲೇ
ನಿನ್ನ ಸಂತಾನವನ್ನು ಸೆರೆ ಒಯ್ದ ದೇಶದಿಂದಲೂ ರಕ್ಷಿಸುತ್ತೇನೆ.
ಯಾಕೋಬನು ತಿರುಗಿಬಂದು ವಿಶ್ರಾಂತಿಯಲ್ಲಿರುವನು.
ಹೆದರಿಸುವವನಿಲ್ಲದೆ ಸುರಕ್ಷಿತವಾಗಿರುವನು.
11 ಏಕೆಂದರೆ ನಿನ್ನನ್ನು ರಕ್ಷಿಸುವುದಕ್ಕೆ ನಾನು ನಿನ್ನ ಸಂಗಡ ಇದ್ದೇನೆ,’
ಎಂದು ಯೆಹೋವ ದೇವರು ಹೇಳುತ್ತಾರೆ.
‘ನಿನ್ನನ್ನು ಎಲ್ಲಿ ಚದರಿಸಿದೆನೋ, ಆ ಎಲ್ಲಾ ಜನಾಂಗಗಳನ್ನು
ನಾನು ಸಂಪೂರ್ಣವಾಗಿ ಮುಗಿಸಿಬಿಟ್ಟಾಗ್ಯೂ
ನಿನ್ನನ್ನು ಸಂಪೂರ್ಣವಾಗಿ ಮುಗಿಸಿಬಿಡುವುದಿಲ್ಲ.
ಮಿತಿಯಲ್ಲಿ ನಿನ್ನನ್ನು ಸರಿಪಡಿಸುವೆನು.
ನಾನು ಶಿಕ್ಷಿಸದೆ ಬಿಡುವುದಿಲ್ಲ.’
12 “ಯೆಹೋವ ದೇವರು ಹೀಗೆ ಹೇಳುತ್ತಾರೆ:
“ ‘ನಿನ್ನ ಗಾಯವು ಗುಣವಾಗದಂಥಾದ್ದು.
ನಿನ್ನ ಬಾಸುಂಡೆಯು ಅಘೋರವಾದದ್ದು.
13 ನಿನಗೋಸ್ಕರ ವಾದಿಸುವವರು ಯಾರೂ ಇರುವುದಿಲ್ಲ.
ನಿನ್ನ ಗಾಯವನ್ನು ನಿನಗೆ ಕಟ್ಟುವ ಹಾಗೆ
ವಾಸಿಮಾಡುವ ಔಷಧಗಳು ನಿನಗೆ ಇಲ್ಲ.
14 ನಿನ್ನ ಮಿತ್ರರೆಲ್ಲರು ನಿನ್ನನ್ನು ಮರೆತುಬಿಟ್ಟಿದ್ದಾರೆ,
ನಿನ್ನನ್ನು ಹುಡುಕುವುದಿಲ್ಲ.
ನಿನ್ನ ಅಕ್ರಮಗಳು ಬಹಳವೂ,
ನಿನ್ನ ಪಾಪಗಳು ಪ್ರಬಲವೂ ಆಗಿರುವುದರಿಂದ
ಶತ್ರುವಿನ ಗಾಯದಿಂದಲೂ,
ಕ್ರೂರನ ಶಿಕ್ಷೆಯಿಂದಲೂ ನಾನು ನಿನ್ನನ್ನು ಗಾಯಪಡಿಸಿದ್ದೇನೆ;
15 ನಿನ್ನ ಗಾಯದ ನೋವಿನ ನಿಮಿತ್ತ ಏಕೆ ಕೂಗುತ್ತೀ?
ನಿನ್ನ ದುಃಖವು ಗುಣವಾಗದಂಥಾದ್ದೇ.
ನಿನ್ನ ಅಕ್ರಮ ಬಹಳವಾಗಿರುವುದರಿಂದಲೂ,
ನಿನ್ನ ಪಾಪಗಳು ಪ್ರಬಲವಾಗಿರುವುದರಿಂದಲೂ ಇವುಗಳನ್ನು ನಿನಗೆ ಮಾಡಿದ್ದೇನೆ.
 
16 “ ‘ಆದರೂ ನಿನ್ನನ್ನು ನುಂಗಿಬಿಡುವವರನ್ನು ನುಂಗಿಬಿಡಲಾಗುವುದು.
ನಿನ್ನ ವಿರೋಧಿಗಳಲ್ಲಿ ಪ್ರತಿಯೊಬ್ಬನೂ ಸೆರೆಹೋಗುವನು.
ನಿನ್ನನ್ನು ಸೂರೆಮಾಡುವವರು ಸೂರೆಯಾಗುವರು.
ನಿನಗೆ ಬಲೆ ಬೀಸುವವರೆಲ್ಲರನ್ನು ನಾನು ಬಲೆಗೆ ಒಪ್ಪಿಸುವೆನು.
17 ಚೀಯೋನು ಬೇಡವಾದದ್ದು, ಅದನ್ನು ನೋಡಿಕೊಳ್ಳುವವರು ಯಾರೂ ಇಲ್ಲ,
ಎಂದು ಅವರು ನಿನ್ನ ವಿಷಯ ಹೇಳುವುದನ್ನು ನಾನು ಸಹಿಸಲಾರದೆ,
ನಿನಗೆ ಕ್ಷೇಮವನ್ನುಂಟು ಮಾಡಿ,
ನಿನ್ನ ಗಾಯಗಳನ್ನು ಸ್ವಸ್ಥ ಮಾಡುವೆನು,’
ಎಂಬುದಾಗಿ ಯೆಹೋವ ದೇವರು ಹೇಳುತ್ತಾರೆ.
18 “ಯೆಹೋವ ದೇವರು ಮತ್ತೆ ಹೀಗೆ ಹೇಳಿದ್ದು,
“ ‘ಇಗೋ, ನಾನು ಯಾಕೋಬನ ಗುಡಾರಗಳ ಸೆರೆಯನ್ನು ತಿರುಗಿ ತರುತ್ತೇನೆ.
ಅವನ ನಿವಾಸಗಳನ್ನು ಕರುಣಿಸುತ್ತೇನೆ.
ಪಟ್ಟಣವು ಅದರ ದಿನ್ನೆಯ ಮೇಲೆ ಕಟ್ಟಲಾಗುವುದು.
ಅರಮನೆಯು ತಕ್ಕ ಸ್ಥಳದಲ್ಲಿ ನೆಲೆಯಾಗಿರುವುದು.
19 ಅವುಗಳೊಳಗಿಂದ ಕೃತಜ್ಞತಾಸ್ತುತಿಯೂ,
ಹರ್ಷಧ್ವನಿಯೂ ಹೊರಡುವುದು.
ಅವರನ್ನು ಹೆಚ್ಚು ಮಾಡುವೆನು.
ಅವರು ಕೊಂಚವಾಗಿರರು,
ಅವರನ್ನು ಘನಪಡಿಸುವೆನು.
ಮತ್ತು ಅವರು ತಿರಸ್ಕಾರಕ್ಕೆ ಒಳಗಾಗುವುದಿಲ್ಲ.
20 ಅವರ ಮಕ್ಕಳು ಸಹ ಪೂರ್ವಕಾಲದ ಹಾಗೆ ಇರುವರು.
ಅವರ ಸಭೆಯು ನನ್ನ ಮುಂದೆ ಸ್ಥಾಪಿತವಾಗುವುದು.
ಅವರನ್ನು ಬಾಧಿಸುವವರೆಲ್ಲರನ್ನು ಶಿಕ್ಷಿಸುವೆನು.
21 ಅವರ ಪ್ರಮುಖನು ಅವರೊಳಗೆ ಇರುವರು.
ಅವರನ್ನು ಆಳುವವನು ಅವರ ಮಧ್ಯದಲ್ಲಿಂದ ಹೊರಡುವನು.
ನಾನು ಅವನನ್ನು ಹತ್ತಿರ ಬರಮಾಡುವೆನು.
ಅವನು ನನಗೆ ಸಮೀಪಿಸುವನು.
ಆದರೆ ನನಗೆ ಸಮೀಪಿಸುವುದಕ್ಕೆ ತನ್ನ ಹೃದಯ ನಿಶ್ಚಯಮಾಡಿಕೊಂಡ ಇವನ್ಯಾರು,’
ಎಂದು ಯೆಹೋವ ದೇವರು ಹೇಳುತ್ತಾರೆ.
22 ‘ನೀವು ನನಗೆ ಪ್ರಜೆಯಾಗಿರುವಿರಿ.
ನಾನು ನಿಮಗೆ ದೇವರಾಗಿರುವೆನು.’ ”
 
23 ಇಗೋ, ಯೆಹೋವ ದೇವರ ಬಿರುಗಾಳಿ
ರೌದ್ರವಾಗಿ ಹೊರಡುತ್ತದೆ.
ಅದು ಬಡಿದುಕೊಂಡು ಹೋಗುವ ಬಿರುಗಾಳಿಯೇ.
ಬಾಧೆಯು ದುಷ್ಟರ ತಲೆಯ ಮೇಲೆ ಬೀಳುವುದು.
24 ಯೆಹೋವ ದೇವರು ತಮ್ಮ ಹೃದಯಾಲೋಚನೆಯನ್ನು ನಡಿಸಿ,
ನೆರವೇರಿಸುವ ತನಕ
ಆತನ ರೋಷವು ಹಿಂದಿರುಗದು;
ಕಟ್ಟಕಡೆಯ ದಿನಗಳಲ್ಲಿ
ನೀವು ಇದನ್ನು ಗ್ರಹಿಸುವಿರಿ.