31
“ಆ ಕಾಲದಲ್ಲಿ ನಾನು ಇಸ್ರಾಯೇಲಿನ ಸಮಸ್ತ ಕುಟುಂಬಗಳಿಗೆ ದೇವರಾಗಿರುವೆನು. ಅವರು ನನ್ನ ಜನರಾಗಿರುವರು,” ಎಂದು ಯೆಹೋವ ದೇವರು ಸಾರುತ್ತಾರೆ.
ಯೆಹೋವ ದೇವರು ಹೀಗೆ ಹೇಳುತ್ತಾರೆ:
“ನಾನು ಅವರಿಗೆ ವಿಶ್ರಾಂತಿ ಕೊಡುವುದಕ್ಕೆ ಹೋಗಲಾಗಿ,
ಖಡ್ಗಕ್ಕೆ ತಪ್ಪಿಸಿಕೊಂಡ ಇಸ್ರಾಯೇಲಿನ
ಜನರಿಗೆ ಮರುಭೂಮಿಯಲ್ಲಿ ದಯೆ ದೊರಕಿತು.”
ಯೆಹೋವ ದೇವರು ಪೂರ್ವದಲ್ಲಿ ನನಗೆ ಕಾಣಿಸಿಕೊಂಡು,
“ಹೌದು, ಶಾಶ್ವತ ಪ್ರೀತಿಯಿಂದ ನಿನ್ನನ್ನು ಪ್ರೀತಿಸಿದ್ದೇನೆ.
ಕುಂದದ ದಯೆಯಿಂದಲೇ ನಿನ್ನನ್ನು ಸೆಳೆದುಕೊಂಡಿದ್ದೇನೆ.
ಇಸ್ರಾಯೇಲಿನ ಕನ್ಯೆಯೇ,
ನಾನು ನಿನ್ನನ್ನು ಮತ್ತೆ ನಿರ್ಮಿಸುವೆನು. ನೀನು ಪುನಃ ನಿರ್ಮಿತವಾಗುವೆ.
ನಿನ್ನ ದಮ್ಮಡಿಗಳಿಂದ ತಿರುಗಿ ನಿನ್ನನ್ನು ಅಲಂಕರಿಸಿಕೊಂಡು
ಸಂತೋಷ ಪಡುವವರ ನಾಟ್ಯದಲ್ಲಿ ಹೊರಡುವೆ.
ಸಮಾರ್ಯದ ಪರ್ವತಗಳಲ್ಲಿ ತಿರುಗಿ
ದ್ರಾಕ್ಷಿಗಿಡಗಳನ್ನು ನೆಡುವೆ.
ರೈತರು ನೆಟ್ಟು ಸಾಧಾರಣವಾದವುಗಳಂತೆ
ಫಲ ಅನುಭವಿಸುವರು.
ಒಂದು ದಿನ ಬರುವದು,
ಆಗ ಎಫ್ರಾಯೀಮನ ಪರ್ವತಗಳ ಮೇಲಿರುವ ಕಾವಲುಗಾರರು,
‘ಏಳಿರಿ, ಚೀಯೋನಿಗೆ,
ನಮ್ಮ ಯೆಹೋವ ದೇವರ ಬಳಿಗೆ ಹೋಗೋಣ,’ ” ಎಂದು ಕೂಗುವರು.
ಏಕೆಂದರೆ ಯೆಹೋವ ದೇವರು ಹೀಗೆ ಹೇಳುತ್ತಾರೆ,
“ಯಾಕೋಬನ ವಿಷಯ ಸಂತೋಷದಿಂದ ಹಾಡಿ,
ಮೂಖ್ಯವಾದ ಜನಾಂಗಗಳೊಳಗೆ ಆರ್ಭಟಿಸಿರಿ.
ಸಾರಿರಿ. ಸ್ತುತಿಸಿರಿ.
‘ಯೆಹೋವ ದೇವರೇ, ನಿನ್ನ ಜನರನ್ನೂ,
ಇಸ್ರಾಯೇಲಿನ ಉಳಿದವರನ್ನೂ ರಕ್ಷಿಸು,’ ಎಂದು ಹೇಳಿರಿ.
ಇಗೋ, ನಾನು ಅವರನ್ನು ಉತ್ತರ ದೇಶದಿಂದ ತಂದು
ಭೂಮಿಯ ಮೇರೆಗಳಿಂದ ಅವರನ್ನು ಕೂಡಿಸುತ್ತೇನೆ.
ಅವರಲ್ಲಿ ಕುರುಡರೂ, ಕುಂಟರೂ, ಗರ್ಭಿಣಿಯಾದವರೂ,
ದಿನತುಂಬಿದ ಗರ್ಭಿಣಿಯರೂ ಇರುವರು.
ದೊಡ್ಡ ಗುಂಪಾಗಿ ಇಲ್ಲಿಗೆ ಹಿಂದಿರುಗಿ ಬರುವರು.
ಅವರು ಅಳುತ್ತಾ ಬರುವರು.
ಬಿನ್ನಹಗಳ ಸಂಗಡ ಅವರನ್ನು ನಡೆಸುವೆನು.
ಅವು ಎಡವದ ಸಮದಾರಿಯಲ್ಲಿ
ನೀರಿನ ನದಿಗಳ ಬಳಿಯಲ್ಲಿ ನಡೆಯುವಂತೆ ಮಾಡುವೆನು.
ಏಕೆಂದರೆ ನಾನು ಇಸ್ರಾಯೇಲಿಗೆ ತಂದೆಯಾಗಿದ್ದೇನೆ.
ಎಫ್ರಾಯೀಮನು ನನ್ನ ಚೊಚ್ಚಲ ಮಗನೇ.
 
10 “ಜನಾಂಗಗಳೇ, ಯೆಹೋವ ದೇವರ ವಾಕ್ಯವನ್ನು ಕೇಳಿರಿ:
ದೂರದಲ್ಲಿರುವ ದ್ವೀಪಗಳಲ್ಲಿ ಅದನ್ನು ಸಾರಿರಿ!
‘ಇಸ್ರಾಯೇಲನ್ನು ಚದರಿಸಿದಾತನೇ ಅವರನ್ನು ಕೂಡಿಸಿ,
ಕುರುಬನು ತನ್ನ ಮಂದೆಯನ್ನು ಕಾಯುವ ಹಾಗೆ ಅವರನ್ನು ಕಾಯುವನು’ ಎಂದು ಪ್ರಕಟಿಸಿರಿ.
11 ಏಕೆಂದರೆ ಯೆಹೋವ ದೇವರು ಯಾಕೋಬ್ಯರನ್ನು ವಿಮೋಚಿಸಿದ್ದಾರೆ.
ಅವರಿಗಿಂತ ಬಲಿಷ್ಠರ ಕೈಯೊಳಗಿಂದ ಅವರನ್ನು ಬಿಡಿಸಿದ್ದಾರೆ.
12 ಅವರು ಬಂದು ಚೀಯೋನ್ ಶಿಖರದಲ್ಲಿ ಹಾಡುವರು;
ಧಾನ್ಯ, ದ್ರಾಕ್ಷಾರಸ, ಎಣ್ಣೆ, ಕರು, ಕುರಿಮರಿ,
ಅಂತು ಯೆಹೋವ ದೇವರು ಅನುಗ್ರಹಿಸುವ ಎಲ್ಲಾ ಮೇಲುಗಳನ್ನು
ಅನುಭವಿಸಲು ಪ್ರವಾಹದಂತೆ ಬರುವರು.
ಅವರ ಆತ್ಮವು ಹದವಾಗಿ ನೀರು ಹಾಯಿಸಿದ ತೋಟದಂತಿರುವುದು;
ಅವರು ಇನ್ನು ಮುಂದೆ ದುಃಖಪಡುವುದಿಲ್ಲ.
13 ಆಗ ಕನ್ನಿಕೆಯರೂ, ಪ್ರಾಯದವರೂ,
ವೃದ್ಧರ ಸಹಿತವಾಗಿ ನಾಟ್ಯವಾಡುತ್ತಾ ಹರ್ಷಿಸುವರು.
ಏಕೆಂದರೆ ನಾನು ಅವರ ದುಃಖವನ್ನು ಆನಂದಕ್ಕೆ ಬದಲಾಯಿಸುವೆನು.
ನಾನು ಅವರನ್ನು ಆಧರಿಸಿ, ಅವರ ದುಃಖದಿಂದ ಬಿಡಿಸಿ, ಅವರಿಗೆ ಸಂತೋಷವನ್ನುಂಟು ಮಾಡುವೆನು.
14 ಇದಲ್ಲದೆ ಯಾಜಕರನ್ನು ಹೇರಳವಾಗಿ ತೃಪ್ತಿಗೊಳಿಸುವೆನು.
ನನ್ನ ಜನರು ನನ್ನ ಒಳ್ಳೆಯತನದಿಂದ ತೃಪ್ತಿಪಡುವರು,”
ಎಂದು ಯೆಹೋವ ದೇವರು ಹೇಳುತ್ತಾರೆ.
15 ಯೆಹೋವ ದೇವರು ಮತ್ತೆ ಹೀಗೆ ಹೇಳುತ್ತಾರೆ:
“ರಾಮದಲ್ಲಿ ರೋದನೆಯೂ,
ಗೋಳಾಟವೂ ಅಘೋರವಾದ ಅಳುವಿಕೆಯೂ ಕೇಳಿಸುತ್ತಿದೆ.
ರಾಹೇಲಳು ತನ್ನ ಮಕ್ಕಳಿಗಾಗಿ ಗೋಳಾಡುತ್ತಾ,
ಆದರಣೆ ಹೊಂದದೆ ಹೋಗಿದ್ದಾಳೆ.
ಏಕೆಂದರೆ ಅವಳ ಮಕ್ಕಳು ಇನ್ನಿಲ್ಲ.”
16 ಯೆಹೋವ ದೇವರು ಇಂತೆನ್ನುತ್ತಾರೆ:
“ನಿನ್ನ ಧ್ವನಿಯು ಗೋಳಾಡದಿರಲಿ;
ನಿನ್ನ ಕಣ್ಣು ನೀರು ಸುರಿಸದಿರಲಿ;
ನಿನ್ನ ಪ್ರಯಾಸವು ಸಾರ್ಥಕವಾಗುವುದು,”
ಎಂದು ಯೆಹೋವ ದೇವರು ಹೇಳುತ್ತಾರೆ.
“ನಿನ್ನ ಮಕ್ಕಳು ಶತ್ರುವಿನ ದೇಶದಿಂದ ಹಿಂದಿರುಗುವರು.
17 ನಿನ್ನ ಭವಿಷ್ಯದಲ್ಲಿ ನಿರೀಕ್ಷೆಯಿದೆ,”
ಎಂದು ಯೆಹೋವ ದೇವರು ಹೇಳುತ್ತಾರೆ.
“ಏಕೆಂದರೆ ನಿನ್ನ ಮಕ್ಕಳು ತಮ್ಮ ಸ್ವಂತ ದೇಶಕ್ಕೆ ತಿರುಗಿ ಬರುವರು.”
 
18 “ಎಫ್ರಾಯೀಮನು ಅಂಗಲಾಚುವುದನ್ನು ನಿಶ್ಚಯವಾಗಿ ಕೇಳಿದೆನು.
ಹೇಗೆಂದರೆ, ‘ನೀನು ನನ್ನನ್ನು ಶಿಕ್ಷಿಸಿದೆ.
ಪಳಗದ ಹೋರಿಗೆ ಆದ ಹಾಗೆ ನನಗೆ ಶಿಕ್ಷೆ ಆಯಿತು.
ನನ್ನನ್ನು ತಿರುಗಿಸು, ಆಗ ತಿರುಗಿಕೊಳ್ಳುವೆನು.
ಯೆಹೋವ ದೇವರೇ, ನೀವೇ ನನ್ನ ದೇವರಾಗಿದ್ದೀರಿ.
19 ನಾನು ನಿಮ್ಮಿಂದ ದೂರವಾದ ಮೇಲೆಯೇ
ಪಶ್ಚಾತ್ತಾಪ ಪಟ್ಟೆನು;
ತಿಳುವಳಿಕೆ ಹೊಂದಿದ ಮೇಲೆಯೇ
ದುಃಖದಿಂದ ನನ್ನ ಎದೆಯನ್ನು ಬಡಿದುಕೊಂಡೆನು.
ನನ್ನ ಯೌವನದ ಅವಮಾನವನ್ನು ನನ್ನ ಮೇಲೆ ಹೊತ್ತುಕೊಂಡ ಕಾರಣ ನಾನು ಲಜ್ಜೆಗೊಂಡೆನು,
ಹೌದು, ತುಂಬಾ ನಾಚಿಕೆಪಟ್ಟೆನು.’
20 ಯೆಹೋವ ದೇವರು ಮುಂದುವರೆಸಿ, ‘ಎಫ್ರಾಯೀಮನು ನನಗೆ ಪ್ರಿಯ ಪುತ್ರನಲ್ಲವೇ?
ಅವನು ನನಗೆ ಹರ್ಷಗೊಂಡಿರುವ ನನ್ನ ಮಗುವಲ್ಲವೋ?
ನಾನು ಅವನಿಗೆ ವಿರೋಧವಾಗಿ ಆಗಾಗ ಮಾತಾಡಿದ್ದರೂ,
ಅವನನ್ನು ಇನ್ನು ಬಹಳವಾಗಿ ಜ್ಞಾಪಕ ಮಾಡುತ್ತೇನೆ.
ಆದ್ದರಿಂದ ಅವನಿಗೋಸ್ಕರ ನನ್ನ ಹೃದಯ ಮರುಗುತ್ತದಲ್ಲಾ
ಅವನನ್ನು ಕನಿಕರಿಸುವೆನು,’ ”
ಎಂದು ಯೆಹೋವ ದೇವರು ಹೇಳುತ್ತಾರೆ.
 
21 “ನಿನಗೋಸ್ಕರ ದಾರಿ ತೋರುವ ಕಂಬಗಳನ್ನೂ ಮತ್ತು ಕೈಮರಗಳನ್ನೂ ನಿಲ್ಲಿಸಿಕೋ
ಹೆದ್ದಾರಿಯ ಕಡೆಗೆ ನೀನು ಹೋದ ದಾರಿಗೂ
ನಿನ್ನ ಹೃದಯವನ್ನು ಇಟ್ಟುಕೋ.
ಇಸ್ರಾಯೇಲಿನ ಕನ್ಯಾ ಸ್ತ್ರೀಯೇ,
ತಿರುಗಿಕೋ, ಈ ಪಟ್ಟಣಗಳಿಗೆ ತಿರುಗು.
22 ವಿಶ್ವಾಸದ್ರೋಹಿ ಇಸ್ರಾಯೇಲ್ ಮಗಳೇ
ಎಷ್ಟರವರೆಗೆ ಅಡ್ಡಾಡುವೆ?
ಏಕೆಂದರೆ ಯೆಹೋವ ದೇವರು ಭೂಮಿಯಲ್ಲಿ ಹೊಸದನ್ನು ಸೃಷ್ಟಿಸುತ್ತಾರೆ.
ಹೆಂಗಸು ಗಂಡಸನ್ನು ಕಾಪಾಡುವಳು.”
23 ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಯೆಹೂದ ದೇಶದಲ್ಲಿಯೂ ಅದರ ಪಟ್ಟಣಗಳಲ್ಲಿಯೂ ನಾನು ಅವರ ಸೆರೆಯನ್ನು ತಿರುಗಿ ತರುವಾಗ, ‘ನೀತಿಯ ನಿವಾಸವೇ, ಪರಿಶುದ್ಧ ಪರ್ವತವೇ, ಯೆಹೋವ ದೇವರು ನಿನ್ನನ್ನು ಆಶೀರ್ವದಿಸಲಿ,’ ಎಂದು ಇನ್ನೂ ಹೇಳುವರು. 24 ಯೆಹೂದದಲ್ಲಿಯೂ, ಅದರ ಎಲ್ಲಾ ಪಟ್ಟಣಗಳಲ್ಲಿಯೂ ಬೇಸಾಯ ಮಾಡುವವರೂ, ಮಂದೆಯ ಸಂಗಡ ಹೊರಡುವವರೂ ವಾಸವಾಗುವರು. 25 ದಣಿದ ಪ್ರಾಣವನ್ನು ತೃಪ್ತಿಪಡಿಸಿದ್ದೇನೆ. ಕುಂದಿದ ಪ್ರಾಣಗಳನ್ನೆಲ್ಲಾ ತುಂಬಿಸಿದ್ದೇನೆ.”
26 ಅಷ್ಟರಲ್ಲಿ ಎಚ್ಚೆತ್ತು ನೋಡಿದೆನು. ನನ್ನ ನಿದ್ದೆ ನನಗೆ ಮಧುರವಾಗಿತ್ತು.
27 ಯೆಹೋವ ದೇವರು ಹೇಳುವುದೇನೆಂದರೆ, “ದಿನಗಳು ಬರುತ್ತವೆ. ಆಗ ನಾನು ಇಸ್ರಾಯೇಲ್ ಮತ್ತು ಯೆಹೂದ ರಾಜ್ಯಗಳಲ್ಲಿ ಮನುಷ್ಯರನ್ನೂ ಪ್ರಾಣಿಗಳನ್ನೂ ಬಿತ್ತಿ ಭರ್ತಿಮಾಡುವೆನು. 28 ನಾನು ಅವರನ್ನು ಕೀಳಲು, ಕೆಡವಲು, ಅಳಿಸಲು ಹಾಳುಮಾಡಲು, ಎಚ್ಚರವಹಿಸಿದ ಹಾಗೆಯೇ ಇನ್ನು ಮುಂದೆ ಅವರನ್ನು ಕಟ್ಟುವುದಕ್ಕೂ, ನೆಡುವುದಕ್ಕೂ ಅವರ ವಿಷಯವಾಗಿ ಎಚ್ಚರವಹಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ. 29 “ಆ ದಿನಗಳಲ್ಲಿ,
“ ‘ತಂದೆಗಳು ಹುಳಿ ದ್ರಾಕ್ಷಿಯನ್ನು ತಿಂದದ್ದರಿಂದ,
ಮಕ್ಕಳ ಹಲ್ಲುಗಳು ಚಳಿತು ಹೋದವೆಂದು ಇನ್ನು ಹೇಳುವುದಿಲ್ಲ.’
30 ಆದರೆ ಒಬ್ಬೊಬ್ಬನು ಸ್ವಂತ ಪಾಪಕ್ಕಾಗಿ ಸಾಯುವನು. ಹುಳಿ ದ್ರಾಕ್ಷಿಯನ್ನು ತಿಂದ ಮನುಷ್ಯನು ಯಾವನೋ, ಅವನ ಹಲ್ಲುಗಳು ಚಳಿತು ಹೋಗುವುವು.”
31 ಯೆಹೋವ ದೇವರು ಹೇಳುವುದನ್ನು ಕೇಳಿ:
“ನಾನು ಇಸ್ರಾಯೇಲ್ ವಂಶದವರೊಂದಿಗೂ,
ಯೆಹೂದ ವಂಶದವರೊಂದಿಗೂ
ಒಂದು ಹೊಸ ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವು.
32 ಈ ಒಡಂಬಡಿಕೆಯು ನಾನು
ಇವರ ಪೂರ್ವಜರನ್ನು ಕೈಹಿಡಿದು
ಈಜಿಪ್ಟ್ ದೇಶದಿಂದ ಕರೆದು ತಂದಾಗ,
ಅವರ ಸಂಗಡ ಮಾಡಿಕೊಂಡ ಒಡಂಬಡಿಕೆಯಂಥದಲ್ಲ.
ನಾನು ಅವರಿಗೆ ಯಜಮಾನನಾಗಿ ಇದ್ದರೂ,
ಆ ನನ್ನ ಒಡಂಬಡಿಕೆಯನ್ನು ಅವರು ಮೀರಿ ನಡೆದರು,”
ಎಂದು ಯೆಹೋವ ದೇವರು ಹೇಳುತ್ತಾರೆ.
33 “ಆ ದಿನಗಳು ಬಂದ ಮೇಲೆ ನಾನು ಇಸ್ರಾಯೇಲ್ ವಂಶದವರೊಂದಿಗೆ ಮಾಡಿಕೊಳ್ಳುವ
ಒಡಂಬಡಿಕೆಯು ಹೀಗಿರುವುದು,” ಎಂದು ಯೆಹೋವ ದೇವರು ಹೇಳುತ್ತಾರೆ.
“ನನ್ನ ನಿಯಮವನ್ನು ಅವರ ಅಂತರಂಗದಲ್ಲಿ ಇಡುವೆನು.
ಅವರ ಹೃದಯದ ಹಲಗೆಯ ಮೇಲೆ ಬರೆಯುವೆನು.
ನಾನು ಅವರಿಗೆ ದೇವರಾಗಿರುವೆನು,
ಅವರು ನನಗೆ ಪ್ರಜೆಯಾಗಿರುವರು.
34 ಇದಲ್ಲದೆ ಪ್ರತಿಯೊಬ್ಬನು ತನ್ನ ನೆರೆಯವನಿಗೂ
ತನ್ನ ಸಹೋದರನಿಗೂ,
‘ಯೆಹೋವ ದೇವರನ್ನು ಅರಿತುಕೊಳ್ಳಿರಿ,’ ಎಂದು ಬೋಧಿಸಬೇಕಾಗಿಲ್ಲ.
ಏಕೆಂದರೆ ಚಿಕ್ಕವರಿಂದ ದೊಡ್ಡವರವರೆಗೂ ಎಲ್ಲರೂ ನನ್ನನ್ನು ಅರಿತುಕೊಳ್ಳುವರು.
ನಾನು ಅವರ ದುಷ್ಕೃತ್ಯಗಳನ್ನು ಕ್ಷಮಿಸುವೆನು,”
ಎಂದು ಯೆಹೋವ ದೇವರು ಹೇಳುತ್ತಾರೆ.
“ಅವರ ಪಾಪಗಳನ್ನು ಇನ್ನೆಂದಿಗೂ
ನನ್ನ ನೆನಪಿಗೆ ತಂದುಕೊಳ್ಳುವುದಿಲ್ಲ.”
35 ಇದು ಯೆಹೋವ ದೇವರಾದ ನನ್ನ ನುಡಿ,
ಯೆಹೋವ ದೇವರು, ಹಗಲಲ್ಲಿ ಬೆಳಕು ನೀಡಲು
ಸೂರ್ಯನನ್ನು ನೇಮಿಸಿದವರು.
ಇರುಳಲ್ಲಿ ಬೆಳಕು ನೀಡಲು
ಚಂದ್ರ ನಕ್ಷತ್ರಗಳನ್ನು ಏರ್ಪಡಿಸಿದವರು.
ಅಲೆಗಳು ಭೋರ್ಗರೆಯುವಷ್ಟು
ಸಮುದ್ರವನ್ನು ಕೆರಳಿಸುವವರು,
ಸೇನಾಧೀಶ್ವರ ಯೆಹೋವ ದೇವರು ಎಂಬ ನಾಮಧೇಯದಿಂದ ಪ್ರಸಿದ್ಧರು.
36 “ಈ ನಿಯಮಗಳು ನನ್ನ ಸನ್ನಿಧಿಯಿಂದ ಯಾವಾಗ ಇಲ್ಲದೆ ಹೋಗುವುವೋ,
ಆಗ ಇಸ್ರಾಯೇಲಿನ ಸಂತಾನವು ಸಹ ಸದಾಕಾಲ
ನನ್ನ ಮುಂದೆ ಜನಾಂಗವಾಗಿರದ ಹಾಗೆ ನಿಂತುಹೋಗುವುದು,”
ಎಂದು ಯೆಹೋವ ದೇವರು ಹೇಳುತ್ತಾರೆ.
37 ಹಾಗೆಯೇ ಯೆಹೋವ ದೇವರು ಹೀಗೆ ಹೇಳುತ್ತಾರೆ:
“ಮೇಲಿನ ಆಕಾಶಮಂಡಲವನ್ನು ಅಳೆಯಬಹುದಾದರೆ,
ಕೆಳಗಿನ ಭೂಮಂಡಲದ ವಿಸ್ತಾರವನ್ನು ಪರೀಕ್ಷಿಸಬಹುದಾದರೆ,
ಆಗ ಮಾತ್ರ ಅದರ ದುಷ್ಕೃತ್ಯಗಳನ್ನು ಮುನ್ನಿಟ್ಟು,
ಇಸ್ರಾಯೇಲ್ ವಂಶವನ್ನು ನಾನು ನಿರಾಕರಿಸಿ ಬಿಡಲು ಸಾಧ್ಯ,”
ಎಂದು ಯೆಹೋವ ದೇವರು ಹೇಳುತ್ತಾರೆ.
38 ಯೆಹೋವ ದೇವರು ಹೇಳುವುದೇನೆಂದರೆ, “ಇಗೋ, ಹನನೇಲನ ಬುರುಜು ಮೊದಲುಗೊಂಡು ಮೂಲೆಯ ಬಾಗಿಲಿನವರೆಗೂ ಪಟ್ಟಣವು ಕರ್ತರಿಗೆ ಕಟ್ಟಲಾಗುವ ದಿನಗಳು ಬರಲಿದೆ. 39 ಅಳತೆ ದಾರವು ಅದಕ್ಕೆ ಎದುರಾಗಿ ಗಾರೇಬಿನ ಗುಡ್ಡದ ಮೇಲೆ ನೇರವಾಗಿ ಹೊರಟು, ಗೋಯದವರೆಗೂ ಆವರಿಸಿಕೊಳ್ಳುವುದು. 40 ಹೆಣ ಹೂಣುವ ಮತ್ತು ಬೂದಿ ತುಂಬುವ ಕಣಿವೆಯಿಂದ, ಕಿದ್ರೋನ್ ಹಳ್ಳ, ಪೂರ್ವದಿಕ್ಕಿನ ಕುದುರೆ ಬಾಗಿಲಮೂಲೆ, ಇವುಗಳವರೆಗಿರುವ ಪ್ರದೇಶವೆಲ್ಲವೂ ಯೆಹೋವ ದೇವರಿಗೆ ಪರಿಶುದ್ಧವಾಗಿರುವುವು. ಈ ಪಟ್ಟಣವು ಇನ್ನೆಂದಿಗೂ ನಿರ್ಮೂಲವಾಗದು, ನಾಶವಾಗದು.”